ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ಕಂದಾಯ ದಿನ ಆಚರಣೆ

ಧಾರವಾಡ: ರಾಜ್ಯ ಸರ್ಕಾರದ ನಿರ್ದೇಶನದಂತೆ ಇಂದು ಧಾರವಾಡ ಜಿಲ್ಲೆಯಾದ್ಯಂತ ಕಂದಾಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ತಹಶೀಲ್ದಾರ ಸಂತೋಷ ಹಿರೇಮಠ ಅವರು ಕಚೇರಿ ಆವರಣದಲ್ಲಿ ಸಸಿ ನೇಡುವ ಮೂಲಕ ಕಂದಾಯ ದಿನಾಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಸರ್ಕಾರದ ಪ್ರಮುಖ ಇಲಾಖೆಯಾಗಿರುವ ಕಂದಾಯ ಇಲಾಖೆಯು ಪ್ರತಿದಿನದ ಆಡಳಿತದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಾರ್ವಜನಿಕರ ನೇರ ಸಂಪರ್ಕಕ್ಕೆ ಬರುವ ಕಂದಾಯ ಇಲಾಖೆಯು ಜನಕಲ್ಯಾಣ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ರೂವಾರಿಯಾಗಿದೆ ಎಂದು ಹೇಳಿದರು.

ತಹಶೀಲ್ದಾರ ಸಂತೋಷ ಹಿರೇಮಠ ಮಾತನಾಡಿ, ಧಾರವಾಡ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸಹಯೋಗದಲ್ಲಿ ಕಂದಾಯ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದೆ. ಕಂದಾಯ ದಿನಾಚರಣೆ ಅಂಗವಾಗಿ ಪ್ರತಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕ ಮತ್ತು ಉಪತಹಶೀಲ್ದಾರ ಕಚೇರಿಗಳ ಆವರಣದಲ್ಲಿ ವಸುಂಧರೆಗೊಂದು ದಿನ ಕಾರ್ಯಕ್ರಮದಡಿ ಹಲಸು, ಸಂಪಿಗೆ ಸಸಿಗಳನ್ನು ನೆಡಲಾಗುತ್ತಿದೆ. ಕಂದಾಯ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಅರಣ್ಯದ ಮಹತ್ವ ತಿಳಿಸುವ ಉದ್ದೇಶದಿಂದ ವಸುಂಧರೆಗೊಂದು ದಿನ ಕಾರ್ಯಕ್ರಮ ಮೂಲಕ ಸಾರ್ವಜನಿಕರಲ್ಲಿ ವನಮಹೋತ್ಸವದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಮಾತನಾಡಿ, ಸರ್ಕಾರಿ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಗುರುತರ ಜವಾಬ್ದಾರಿ ಹೊಂದಿರುವ ಕಂದಾಯ ಇಲಾಖೆಯು ಸರ್ಕಾರಿ ವ್ಯವಸ್ಥೆಯಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಕಂದಾಯ ಇಲಾಖೆಯ ನೌಕರರು ಧಾರವಾಡ ಜಿಲ್ಲೆಯಲ್ಲಿ ಕಂದಾಯ ದಿನಾಚರಣೆಯನ್ನು ವನಮಹೋತ್ಸವದ ಮೂಲಕ ವಿಶಿಷ್ಠವಾಗಿ ಆಚರಿಸುತ್ತಿರುವುದು ಸಂತೋಷದ ಸಂಗತಿ.

ಕಂದಾಯ ಇಲಾಖೆ ಸೇರಿದಂತೆ ಜನರೊಂದಿಗೆ ದಿನನಿತ್ಯ ಬೆರೆಯುವ ಇಲಾಖೆಗಳ ಸಿಬ್ಬಂದಿಗಳ ಮೇಲೆ ಯಾವುದೇ ರೀತಿಯ ದಬ್ಬಾಳಿಕೆ, ಅನ್ಯಾಯ ಮತ್ತು ಬೆದರಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದನ್ನು ಸಂಘವು ಖಂಡಿಸಿ ಅಂತಹ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ನೌಕರನಿಗೆ ಕರ್ತವ್ಯ ನಿರ್ವಹಣೆಯಲ್ಲಿ ತೊಂದರೆ ಉಂಟಾದರೆ ಸಂಘವು ಉಗ್ರವಾಗಿ ಪ್ರತಿಭಟಿಸುತ್ತದೆ. ನೌಕರರು ನಿರ್ಭಯವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಅವರು ಹೇಳಿದರು.

Edited By : PublicNext Desk
Kshetra Samachara

Kshetra Samachara

01/07/2022 01:42 pm

Cinque Terre

8.31 K

Cinque Terre

0

ಸಂಬಂಧಿತ ಸುದ್ದಿ