ಧಾರವಾಡ: ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳ ತೀವ್ರತೆ, ಚುನಾವಣೆ, ಪ್ರವಾಹ ನಿರ್ವಹಣೆ ಸೇರಿದಂತೆ ಅನೇಕ ಸವಾಲುಗಳನ್ನು ಜಿಲ್ಲೆಯಲ್ಲಿ ಸಾಂಘಿಕ ಪ್ರಯತ್ನದೊಂದಿಗೆ ನಿರ್ವಹಿಸಿದ ತೃಪ್ತಿ ನನಗಿದೆ. ಧಾರವಾಡ ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರುತ್ತದೆ. ಇಲ್ಲಿನ ಕರ್ತವ್ಯ ನಿರ್ವಹಣೆಯು ಭವಿಷ್ಯದ ವೃತ್ತಿ ಜೀವನಕ್ಕೆ ಹೊಸ ಭರವಸೆ ತಂದುಕೊಟ್ಟಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.
ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಧಾರವಾಡದಲ್ಲಿ ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯ, ಅಧಿಕಾರವಹಿಸಿಕೊಂಡ ಕೂಡಲೇ ಕೋವಿಡ್ ಅಲೆ ತೀವ್ರಗೊಳ್ಳತೊಡಗಿತು, ಕೋವಿಡ್ ಕೇರ್ ಸೆಂಟರ್‌ಗಳ ಸ್ಥಾಪನೆ, ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯುವ ಸವಾಲಿನ ಕಾರ್ಯವನ್ನು ಜಿಲ್ಲೆಯ ಆಡಳಿತದ ಎಲ್ಲಾ ವಿಭಾಗಗಳ ನೆರವಿನೊಂದಿಗೆ ಸಮರ್ಥವಾಗಿ ನಿರ್ವಹಿಸಿದ ತೃಪ್ತಿಯಿದೆ. ವಿಧಾನಪರಿಷತ್, ಗ್ರಾಮ ಪಂಚಾಯತ, ಮಹಾನಗರಪಾಲಿಕೆ ಚುನಾವಣೆಗಳು, ಕಂದಾಯ ಸಚಿವರ ಛಬ್ಬಿ ಗ್ರಾಮ ವಾಸ್ತವ್ಯ, ಪ್ರವಾಹ ನಿರ್ವಹಣೆ ಸೇರಿದಂತೆ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಸಮಾಧಾನವಿದೆ.
ಹುಬ್ಬಳ್ಳಿಯ ಕಿಮ್ಸ್ ಮೇಲೆ ಸುತ್ತಲಿನ 7-8 ಜಿಲ್ಲೆಗಳ ಅವಲಂಬನೆ ಇದ್ದುದರಿಂದ ಪ್ರತಿನಿತ್ಯ ದೊಡ್ಡ ಪ್ರಮಾಣದ ವೈದ್ಯಕೀಯ ಆಕ್ಸಿಜನ್ ಸರಬರಾಜನ್ನು ಸಮರೋಪಾದಿಯಲ್ಲಿ ಸರಬರಾಜು ಮಾಡಿದ್ದು ಸಾಮಾನ್ಯ ಸವಾಲು ಆಗಿರಲಿಲ್ಲ. ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಮರ್ಥವಾಗಿ ಎದುರಿಸಿದ್ದು ವೃತ್ತಿ ಜೀವನಕ್ಕೆ ಹೊಸ ಭರವಸೆ ತಂದು ಕೊಟ್ಟಿದೆ. ಸಂಕಷ್ಟದ ದಿನಗಳು ಈಗ ಕಳೆದಿವೆ, ಜಿಲ್ಲೆಯ ಜನರಿಗೆ ಧಾರವಾಡ ಉತ್ಸವದಂತಹ ಸಾಂಸ್ಕೃತಿಕ ಹಬ್ಬ ನೀಡುವ ಕನಸು ಇತ್ತು, ಬರುವ ದಿನಗಳಲ್ಲಿ ಆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಸ್ವಾಗತ ಸ್ವೀಕರಿಸಿದ ನೂತನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ನಿತೇಶ್ ಪಾಟೀಲ ಅವರು ತಾವೇ ಸ್ವತಃ ಎಲ್ಲಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಇಡೀ ತಂಡದಿಂದ ಕೆಲಸ ಮಾಡುವಲ್ಲಿ ಮಾದರಿ ಕಾರ್ಯನಿರ್ವಹಿಸಿದ್ದಾರೆ. ಆಡಳಿತಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದ್ದಾರೆ.
ಅವರ ಮಟ್ಟಕ್ಕೆ ಕಾರ್ಯನಿರ್ವಹಿಸುವ ಸವಾಲು ತಮ್ಮ ಮುಂದಿದೆ. ಅವರ ಮಾರ್ಗದರ್ಶನದೊಂದಿಗೆ ಜಿಲ್ಲೆಯನ್ನು ಮುನ್ನಡೆಸೋಣ. ಇದೀಗ ಕಷ್ಟದ ದಿನಗಳು ಕಳೆದಿದ್ದು ,ಮುಂಬರುವ ದಿನಗಳಲ್ಲಿ ಅರ್ಥಪೂರ್ಣ ಧಾರವಾಡ ಉತ್ಸವ ಆಚರಿಸೋಣ ಎಂದರು.
Kshetra Samachara
13/05/2022 11:29 pm