ಧಾರವಾಡ: ಬೀದಿ ಬದಿ ವ್ಯಾಪಾರಿಗಳು ನಗರಗಳಲ್ಲಿ ಅನೌಪಚಾರಿಕ ಆರ್ಥಿಕತೆಯ ಪ್ರಮುಖ ವಿಭಾಗವಾಗಿದ್ದಾರೆ. ಬೀದಿ ವ್ಯಾಪಾರವು ಸ್ವಯಂ ಉದ್ಯೋಗವಾಗಿದ್ದು, ನಗರ ಬಡತನ ನಿವಾರಣೆಯ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲ ಸೋಮಶೇಖರ ಜಾಡರ ಹೇಳಿದರು.
ಕಲಘಟಗಿ ಪಟ್ಟಣ ಪಂಚಾಯತ ಹಾಗೂ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ದೀನ ದಯಾಳ್ ಅಂತ್ಯೋದಯ ರಾಷ್ಟ್ರೀಯ ಯೋಜನೆಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಬೀದಿಬದಿ ವ್ಯಾಪಾರಿಗಳ ಅಧಿನಿಯಮ, ನಿಯಮ ಮತ್ತು ಯೋಜನೆಗಳ ಕುರಿತು ಕಲಘಟಗಿ ಪಟ್ಟಣ ಪಂಚಾಯತ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 2 ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿ, ಅವರು ಮಾತನಾಡಿದರು.
ಬೀದಿ ಬದಿ ವ್ಯಾಪಾರವು ನಗರವಾಸಿಗಳ ದಿನನಿತ್ಯದ ಮೂಲಸೌಕರ್ಯಗಳ ಪೂರೈಕೆ ಸರಪಳಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಬಡವರು ಸೇರಿದಂತೆ ಜನಸಂಖ್ಯೆಯ ಎಲ್ಲ ವರ್ಗಗಳಿಗೆ ಸರಕು ಮತ್ತು ಸೇವೆಗಳನ್ನು ಕಡಿಮೆ ದರದಲ್ಲಿ ಪೂರೈಸುವ ಅವಕಾಶವನ್ನು ಒದಗಿಸುತ್ತದೆ. ಆದ್ದರಿಂದ ಬೀದಿ ಬದಿ ವ್ಯಾಪಾರವು ನಗರ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದೆ ಎಂದರು.
ಪ್ಯಾನೆಲ್ ವಕೀಲೆ ಬಸಮ್ಮ ಹೊಸಮನಿ ಮಾತನಾಡಿ, ಪಟ್ಟಣಗಳಲ್ಲಿ ಮಾರಾಟ ಸಮಿತಿ ರಚನೆ, ಅದರ ಜವಾಬ್ದಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಗೌಳಿ ಶಿಬಿರವನ್ನು ಉದ್ಘಾಟಿಸಿದರು. ಪಟ್ಟಣ ಪಂಚಾಯತ ಅಧ್ಯಕ್ಷೆ ಅನಸೂಯಾ ಹೆಬ್ಬಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ಮೋರೆ ಮತ್ತು ಚೇತನಾ ಬೇಗೂರಶೆಟ್ಟಿ ಪ್ರಾರ್ಥಿಸಿದರು. ಸಮುದಾಯ ಸಂಘಟಕರಾದ ಶರಣಪ್ಪ ಉಣಕಲ್ ಸ್ವಾಗತಿಸಿ, ವಂದಿಸಿದರು.
Kshetra Samachara
25/03/2022 10:08 pm