ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶುದ್ಧ ಗಾಳಿ ಸ್ವಚ್ಛ ಪರಿಸರ ನಿರ್ವಹಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಮಾಧವ ಗಿತ್ತೆ

ಧಾರವಾಡ: ಶುದ್ಧ ಗಾಳಿ, ಸ್ವಚ್ಛ ಪರಿಸರ ಪ್ರತಿಯೊಬ್ಬ ನಾಗರಿಕರ ಮೂಲಭೂತ ಕರ್ತವ್ಯ ನಿರ್ವಹಣೆಯ ಹೊಣೆಗಾರಿಕೆಯಾಗಿದೆ. ಹವಾಮಾನ ಬದಲಾವಣೆಯ ಪರಿಣಾಮ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿವೆ. ಆರೋಗ್ಯ, ಆರ್ಥಿಕತೆಯ ಸುಸ್ಥಿರತೆಗೆ ಉತ್ತಮ ನೈಸರ್ಗಿಕ ಪರಿಸರ ಅತ್ಯಗತ್ಯವಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಅಪರ ಆಯುಕ್ತ ಮಾಧವ ಗಿತ್ತೆ ಹೇಳಿದರು.

ನಬಾರ್ಡ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿಜ್ಞಾನ,ತಂತ್ರಜ್ಞಾನ ಹಾಗೂ ನೀತಿ ಅಧ್ಯಯನ ಕೇಂದ್ರ(Centre for study of Science, Technology and Policy) ಸಹಯೋಗದಲ್ಲಿ ರಾಯಾಪುರದ ಓಸಿಯನ್ ಪರ್ಲ್ ಹೋಟೆಲ್‌ನಲಿನಲ್ಲಿ ಇಂದು ಏರ್ಪಡಿಸಿದ್ದ ಹವಾಮಾನ ಬದಲಾವಣೆ ಹಾಗೂ ರಾಷ್ಟ್ರೀಯ ಸ್ವಚ್ಛ ಗಾಳಿ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಛ ಗಾಳಿ, ಪರಿಸರ ನಿರ್ವಹಣೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ಅದನ್ನು ನಿರ್ವಹಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಸಾರ್ವಜನಿಕ‌ ಸ್ಥಳಗಳನ್ನು ಮಲಿನಗೊಳಿಸದೇ, ಶುಚಿಯಾಗಿಟ್ಟುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ಕಾರ್ಯ ನಮ್ಮ ಕುಟುಂಬ, ಮನೆಗಳಿಂದಲೇ ಪ್ರಾರಂಭವಾಗಬೇಕು. ಹವಾಮಾನ ಬದಲಾವಣೆಯು ಜನರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಅಸ್ತಮಾ, ಮತ್ತಿತರ ಉಸಿರಾಟ ಸಂಬಂಧಿತ ಸಮಸ್ಯೆಗಳು ಉದ್ಭವಿಸುತ್ತಿವೆ. ಉತ್ತಮ ನೈಸರ್ಗಿಕ ಪರಿಸರವು ಕಾರ್ಯದಕ್ಷತೆ ಹೆಚ್ಚಿಸಿ ಸಾರ್ವಜನಿಕ ಆರೋಗ್ಯ ಹಾಗೂ ಆರ್ಥಿಕತೆಯ ಸುಸ್ಥಿರ ವಿಕಾಸಕ್ಕೆ ಪೂರಕವಾಗುತ್ತದೆ ಎಂದರು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬಳೆ ಮಾತನಾಡಿ, ಅಂತರ್ಜಲ ಮಟ್ಟ ಹೆಚ್ಚಳದ ಮೂಲಕ ಪರಿಸರ ಸಮತೋಲನ ಕಾಪಾಡಲು ನಬಾರ್ಡ್ ಕಾರ್ಯಕ್ರಮಗಳನ್ನು ರೂಪಿಸಿದೆ. ಸರ್ಕಾರೇತರ ಸಂಸ್ಥೆಗಳು ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ 300 ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಸುಮಾರು 10 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹೊಂದಿದೆ ಎಂದರು.

ಹಿರಿಯ ವಿಜ್ಞಾನಿ, ಲೇಖಕಿ ಡಾ.ಇಂದು ಕೆ. ಮೂರ್ತಿ ಮಾತನಾಡಿ, ಹವಾಮಾನ ಬದಲಾವಣೆಯಿಂದ ಜೀವನದ ಹಲವು ಮಗ್ಗಲುಗಳಲ್ಲಿ ಉಂಟು ಮಾಡುವ ಪರಿಣಾಮಗಳನ್ನು ನಾವು ಅರಿಯಬೇಕು. ಆಗ ಮಾತ್ರ ನಿರ್ದಿಷ್ಟ ಪರಿಹಾರಗಳನ್ನು ಕಂಡುಕೊಂಡು ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಇಂದೇ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲಿದೆ. ಮಳೆಯಾಧಾರಿತ ಕೃಷಿ ಪ್ರದೇಶಗಳಲ್ಲಿ ಸುಸ್ಥಿರ ಬೇಸಾಯ ಕ್ರಮಗಳು ಹಾಗೂ ಪೂರಕ ಚಟುವಟಿಕೆಗಳ ಅಗತ್ಯ ತೀವ್ರವಾಗಿದೆ ಎಂದರು.

ಕೃಷಿ ವಿ.ವಿ.ಯ ಹವಾಮಾನ ವಿಭಾಗದ ಮುಖ್ಯಸ್ಥ ಡಾ.ಆರ್.ಹೆಚ್.ಪಾಟೀಲ ಮಾತನಾಡಿ, ಕೃಷಿರಂಗದ ಮೇಲೆ ಹವಾಮಾನ ಬದಲಾವಣೆಯಿಂದ ಹಲವಾರು ಪರಿಣಾಮಗಳಾಗುತ್ತಿವೆ. ತ್ಯಾಜ್ಯ ಉತ್ಪಾದನೆಗಿಂತಲೂ ತ್ಯಾಜ್ಯ ನಿರ್ವಹಣೆ ಬಹಳ ಮುಖ್ಯವಾಗಿದೆ. ಪ್ಲಾಸ್ಟಿಕ್ ಹಾಗೂ ನಾಶವಾಗದ ತ್ಯಾಜ್ಯಗಳು ಹವಾಮಾನದ ಮೇಲೆ ದೊಡ್ಡ ದುಷ್ಪರಿಣಾಮ ಬೀರುತ್ತಿವೆ. ಇವುಗಳ ಕುರಿತು ಎಚ್ಚೆತ್ತುಕೊಳ್ಳುವುದು ವಿಳಂಬವಾದಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ. ಒಂದೆಡೆ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗುತ್ತಿದ್ದರೂ ಜನರ ಹಸಿವಿನ ಪ್ರಮಾಣ ಸಂಪೂರ್ಣ ಹಿಂಗಿಸುವುದು ಇಂದಿಗೂ ಸವಾಲಾಗಿಯೇ ಉಳಿದಿದೆ. ಮುಂಬರುವ 8-10 ವರ್ಷಗಳ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವ ಎಲ್ಲಾ ಸಾಧ್ಯತೆಗಳಿವೆ. ಜನಸಂಖ್ಯೆ ಏರಿಕೆ ಹಾಗೂ ಆಹಾರ ಉತ್ಪಾದನೆ ಮಧ್ಯೆ ಬಹಳ ಅಂತರವಿದೆ ಅದನ್ನು ಸರಿದೂಗಿಸುವತ್ತ ಗಂಭೀರ ಪ್ರಯತ್ನಗಳಾಗಬೇಕು ಎಂದರು.

ಸಿಸ್ಟೆಪ್ (CSTEP) ಹಿರಿಯ ವಿಜ್ಞಾನಿಗಳಾದ ಅನಿರ್ಬನ್ ಬ್ಯಾನರ್ಜಿ, ಡಾ.ಪ್ರತಿಮಾ ಸಿಂಗ್, ಉದಯಕುಮಾರ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಮಹೇಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳನ್ನು ಮಂಡಿಸಿದರು.

ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

04/03/2022 01:13 pm

Cinque Terre

3.61 K

Cinque Terre

0

ಸಂಬಂಧಿತ ಸುದ್ದಿ