ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿಪತ್ತು ನಿರ್ವಹಣೆ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಪ್ರಾತ್ಯಕ್ಷಿಕೆ

ಧಾರವಾಡ: ಅಗ್ನಿ ಅವಘಡಗಳು, ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕಗಳು ಮೊದಲಾದ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಧಾರವಾಡದಲ್ಲಿ ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಪ್ರಾತ್ಯಕ್ಷಿಕೆಗಳನ್ನು ಮಾಡುವ ಮೂಲಕ ಗಮನಸೆಳೆದರು.

ಧಾರವಾಡ ಗಾಂಧಿನಗರದ ಜಿಲ್ಲಾ ತರಬೇತಿ ಸಂಸ್ಥೆ ಆವರಣದಲ್ಲಿ ಮೈಸೂರಿನ ಎಟಿಐ ವಿಕೋಪ ನಿರ್ವಹಣಾ ಕೇಂದ್ರ ಏರ್ಪಡಿಸಿದ್ದ ಜಿಲ್ಲಾ ವಿಕೋಪ ನಿರ್ವಹಣೆ ಯೋಜನೆ ಪರಿಷ್ಕರಣೆ ಕುರಿತ ಕಾರ್ಯಾಗಾರದಲ್ಲಿ ಈ ಪ್ರಾತ್ಯಕ್ಷಿಕೆ ಜರುಗಿತು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಲುಕುಟಿಗರ್ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಅಮೃತ ಅವರು ಮಾತನಾಡಿ, ವಿವಿಧ ರೀತಿಯ ಅಗ್ನಿ ಅವಘಡಗಳ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕ್ರಮಗಳು, ಅಡಿಗೆ ಅನಿಲ, ವಾಹನಗಳ ಇಂಧನ ಸೋರಿಕೆ ಮತ್ತಿತರ ವಿಪತ್ತು ಸಂದರ್ಭದಲ್ಲಿ ಬೆಂಕಿಗೆ ಕಾರಣವಾಗುವ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕು. ಬೆಂಕಿ ನಂದಿಸಲು ನೀರು, ತಂಪುಕಾರಕ ವಸ್ತುಗಳು, ಫೋಮ್, ಬ್ಲ್ಯಾಂಕೆಟ್ ಬಳಕೆ ಪದ್ಧತಿಗಳನ್ನು ಪಾಲಿಸಬೇಕು. ಯಾವ ರೀತಿಯ ಅವಘಡ ಸಂಭವಿಸಿದೆ ಎಂಬುದನ್ನು ಆಧರಿಸಿ ಶಮನದ ವಿಧಾನ ನಿರ್ಧಾರವಾಗುತ್ತದೆ ಎಂದರು.

ಪ್ರವಾಹ ಸಂದರ್ಭದಲ್ಲಿ ಜೀವರಕ್ಷಣೆಗೆ ಅಗತ್ಯವಿರುವ ಲೈಫ್ಜಾಕೆಟ್, ಬೋಟ್, ರೋಪ್ ಲ್ಯಾಡರ್, ಆಮ್ಲಜನಕ ಪೂರೈಕೆಯ ಸಾಧನಗಳೊಂದಿಗೆ ಸಿಬ್ಬಂದಿ ಸದಾಕಾಲ ಸನ್ನದ್ಧರಾಗಿರುತ್ತಾರೆ. ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ 101 ದೂರವಾಣಿ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ವಿವರಿಸಿದರು.

ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ 2 ದಿನಗಳ ಕಾಲ ನಡೆದ ಕಾರ್ಯಾಗಾರ ಇಂದು ಸಮಾರೋಪಗೊಂಡಿತು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ ಮಾತನಾಡಿ, ವಿಪತ್ತು ನಿರ್ವಹಣೆ ಕಾರ್ಯವು ಆಡಳಿತ ವ್ಯವಸ್ಥೆಯ ಮುಖ್ಯ ಜವಾಬ್ದಾರಿಗಳಲ್ಲೊಂದಾಗಿದೆ. ಎಲ್ಲ ಇಲಾಖೆಗಳು ತಮ್ಮ ಪಾತ್ರ ಅರಿತು ಸಕಾಲಿಕವಾಗಿ ನಿರ್ವಹಿಸಬೇಕು. ವಿಪತ್ತು ನಿರ್ವಹಣೆಗೆ ಪ್ರಾಥಮಿಕವಾಗಿ ಸ್ಪಷ್ಟ ಯೋಜನೆ ಸಿದ್ಧಪಡಿಸಿ ಇಟ್ಟುಕೊಂಡಿರಬೇಕು ಎಂದರು.

ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಭಾರತಿ ಮುಗದುಮ್ ಅವರು ಕೈಗಾರಿಕಾ ವಿಪತ್ತು ನಿರ್ವಹಣೆ ಯೋಜನೆ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಕವಿತಾ ಅಂಗಡಿ, ಎಟಿಐ ಬೋಧಕ ಡಾ.ಚಂದ್ರ ನಾಯಕ, ಜಿಲ್ಲಾಧಿಕಾರಿಗಳ ಕಚೇರಿ ವಿಪತ್ತು ನಿರ್ವಹಣೆ ಸಂಯೋಜಕ ಪ್ರಕಾಶ ವೈ.ಎಚ್ ಮತ್ತಿತರರು ಪಾಲ್ಗೊಂಡಿದ್ದರು.

Edited By : Manjunath H D
Kshetra Samachara

Kshetra Samachara

30/06/2022 07:52 pm

Cinque Terre

29.5 K

Cinque Terre

0

ಸಂಬಂಧಿತ ಸುದ್ದಿ