ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ‘ಸಪ್ತಪರ್ಣಿ’ ‘ಅಲ್‍ಸ್ಟೋನಿಯಾ ಸ್ಕೊಲ್ಯಾರಿಸ್’ ಎಂದು ಕರೆಯಲಾಗುವ ಮೂಲ ಚೀನಾ, ಆಸ್ಟ್ರೇಲಿಯಾ ಮತ್ತು ಭಾಗಶಃ ಟ್ರಾಫಿಕಲ್ ಏಷ್ಯಾ ಭಾಗದ ಆರು ಮರಗಳು ಪ್ರಥಮ ಬಾರಿಗೆ ಐದು ವರ್ಷಗಳ ಬಳಿಕ ಹೂವು ಬಿಟ್ಟು ಸುವಾಸನೆ ಬೀರುತ್ತಿವೆ.
ನಗರದ ಕೆಲಗೇರಿ ಬಳಿಯ ಗಾಯತ್ರಿಪುರಂ ಬಡಾವಣೆಯಲ್ಲಿ ಸುವಾಸನೆ ಬೀರುವ ಈ ಹೂವು ಮೈತುಂಬ ಹೊದ್ದು ನಿಂತಿವೆ.
‘ಬ್ಲ್ಯಾಕ್‍ಬೋರ್ಡ್ ಟ್ರೀ’ ಅಥವಾ ‘ಡೆವಿಲ್ಸ್ ಟ್ರೀ’ ಎಂದೂ ಕೂಡ ಕರೆಯಲಾಗುವ ಈ ಮರಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಾಣಸಿಗುವ, ‘ಎಪೋಸಿನೇಸಿಯೆ’ ಕುಟುಂಬ ಪ್ರಬೇಧಕ್ಕೆ ಸೇರಿದ ಮರಗಳು.
ಈ ಸಪ್ತಪರ್ಣಿ ಮರದ ಕಾಂಡವನ್ನು ಪೆನ್ಸಿಲ್ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ತುಂಬ ವೇಗವಾಗಿ, ತಾಳಿಕೆ ಮತ್ತು ಬಾಳಿಕೆಯಿಂದ ಈ ಮರ ಹುಲುಸಾಗಿ ಬೆಳೆಯುತ್ತದೆ. ಶ್ರೀಲಂಕಾದಲ್ಲಿ ಮರದ ಶವ ಪೆಟ್ಟಿಗೆಗಳ ತಯಾರಿಕೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಮರ ‘ಅಲ್‍ಸ್ಟೋನಿಯಾ ಸ್ಕೊಲ್ಯಾರಿಸ್’.
ಈ ಮರಗಳನ್ನು ಗಾಯತ್ರಿಪುರಂ ಲೇಔಟ್ ಮಾಡಿದವರು ತಂದು ಹಚ್ಚಿದ್ದರು. ಈ ಮರದಲ್ಲಿ ಏಳು ಎಲೆಗಳಿರುತ್ತವೆ. ಆಯುರ್ವೇದದಲ್ಲಿ ಅತಿಸಾರ ಭೇದಿ, ಅತೀ ಹೆಚ್ಚು ಬಾಧಿತ ಡಯೋರಿಯಾ ಹಾಗೂ ಅಪಚನ ಸಂಬಂಧಿ ಜಠರ ವ್ಯಾಧಿಗಳಿಗೆ ಸಪ್ತಪರ್ಣಿ ಮರದ ಟೊಂಗೆಗಳನ್ನು ಔಷಧವಾಗಿಯೂ ಬಳಸಲಾಗುತ್ತದೆಯಂತೆ. ಇಂತಹ ಮರಗಳು ಧಾರವಾಡದಲ್ಲಿ ಪ್ರಥಮ ಬಾರಿಗೆ ಹೂವು ಬಿಟ್ಟಿದ್ದು, ಪರಿಸರ ಪ್ರೇಮಿಗಳಲ್ಲಿ ಖುಷಿ ಮೂಡಿಸಿದೆ.
Kshetra Samachara
04/11/2020 02:22 pm