ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸುಪ್ರೀಂಕೋರ್ಟ್ ದಿಕ್ಕು ತಪ್ಪಿಸಿತಾ ಹೆದ್ದಾರಿ ಪ್ರಾಧಿಕಾರ?

ಧಾರವಾಡ: ಜ.15 ಧಾರವಾಡ ಎಂದಿಗೂ ಮರೆಯಲಾಗದ ದಿನ. ಏಕೆಂದರೆ ಆ ದಿನ ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ ನಡೆದು 12 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ದೇಶದಾದ್ಯಂತ ಸುದ್ದಿಯಾಗಿತ್ತು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಈ ಅಪಘಾತದ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ಅಲ್ಲದೇ ಸ್ವತಃ ಸುಪ್ರೀಂಕೋರ್ಟ್ ಕೂಡ ಈ ಘಟನೆ ಹಾಗೂ ಬೈಪಾಸ್ ರಸ್ತೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಪ್ರೀಂ ಕೋರ್ಟ್ ದಿಕ್ಕು ತಪ್ಪಿಸುವ ರೀತಿಯಲ್ಲಿ ಸುಳ್ಳು ವರದಿ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ಭೀಕರ ಅಪಘಾತದ ನಡೆದ ಬಳಿಕ ರಸ್ತೆ ಅಗಲೀಕರಣ ಮಾಡುವಂತೆ ಧಾರವಾಡದ ಜನರು ಹಾಗೂ ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಅಪಘಾತ ಮತ್ತು ರಸ್ತೆಯ ಸ್ಥಿತಿಯ ಕುರಿತು ಫೆಬ್ರವರಿ 15ರೊಳಗೆ ವರದಿ ನೀಡುವಂತೆ ಸೂಚನೆ ನೀಡಿತ್ತು.

ಈ ಹಿನ್ನೆಲೆ ಹೆದ್ದಾರಿ ಪ್ರಾಧಿಕಾರ ಕೋರ್ಟ್​ಗೆ ವರದಿ ನೀಡಿದೆ. ಆದರೆ, ವರದಿಯಲ್ಲಿ ರಸ್ತೆ ಸರಿ ಇದೆ, ವಾಹನ ಚಾಲಕನ ತಪ್ಪಿನಿಂದ ಅಪಘಾತವಾಗಿದೆ. ಜನೆವರಿ 15ರಂದು ಅಪಘಾತ ನಡೆದ ಸ್ಥಳದಲ್ಲಿ 20 ವರ್ಷಗಳಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ತಪ್ಪು ಮಾಹಿತಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಬೈಪಾಸ್ ರಸ್ತೆ ನಿರ್ಮಾಣವಾಗಿ 23 ವರ್ಷಗಳಲ್ಲಿ ಒಟ್ಟು 1,200 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​​ ಶೆಟ್ಟರ್ ಅವರನ್ನು ಪ್ರಶ್ನಿಸಿದರೆ, ಆ ಬಗ್ಗೆ ನನಗೆ ಗೊತ್ತಿಲ್ಲ. ವರದಿಯ ಸತ್ಯಾಸತ್ಯತೆ ಗಮನಿಸಿ ಸಮಾಲೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಪ್ಪು ವರದಿ ಸಲ್ಲಿಕೆ ಮಾಡಿದ್ದರೆ ಅದಕ್ಕಿಂತ ದೊಡ್ಡ ಕ್ರಿಮಿನಲ್ ಕೆಲಸ ಮತ್ತೊಂದಿಲ್ಲ. ಆ ರಸ್ತೆಯಲ್ಲಿ ಅಪಘಾತವಾಗಿ ನಾನೇ ಬದುಕಿ ಬಂದಿದ್ದೇನೆ. ಈ ರೀತಿಯ ತಪ್ಪು ವರದಿ ಸಲ್ಲಿಕೆಯಾಗಿದ್ದರೆ, ಅದನ್ನು ಸಲ್ಲಿಸಿದವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಶಾಸಕ ಅರವಿಂದ ಬೆಲ್ಲದ ಕೂಡ ಹೇಳಿದ್ದಾರೆ.

ಈಗಾಗಲೇ ಈ ಬೈಪಾಸ್ ರಸ್ತೆ ಸಾವಿನ ಹೆದ್ದಾರಿ ಎಂದು ಖ್ಯಾತಿ ಪಡೆದಿದೆ. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಟೋಲ್ ಕೂಡ ಸಂಗ್ರಹವಾಗುತ್ತಿದ್ದು, ಇನ್ನೂ ಕೂಡ ಆ ರಸ್ತೆ ಅಗಲೀಕರಣವಾಗಿಲ್ಲ. ಮೇಲಿಂದ ಮೇಲೆ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಲೇ ಇದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಈ ರಸ್ತೆ ಉತ್ಕೃಷ್ಟ ರಸ್ತೆ ಎಂದು ವರದಿ ನೀಡುವ ಮೂಲಕ ಸುಪ್ರೀಂ ಕೋರ್ಟ್ ನ ದಿಕ್ಕು ತಪ್ಪಿಸಲು ಹೊರಟಿದ್ದು, ಸ್ಪಷ್ಟವಾಗಿ ಗೊತ್ತಗಿದೆ.

Edited By : Manjunath H D
Kshetra Samachara

Kshetra Samachara

25/02/2021 04:33 pm

Cinque Terre

82.33 K

Cinque Terre

25

ಸಂಬಂಧಿತ ಸುದ್ದಿ