ಧಾರವಾಡ: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯ ಸದಾ ಒಂದಿಲ್ಲೊಂದು ವಿವಾದ ಹಾಗೂ ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ. ಇಲ್ಲಿ ಕಲಿಯುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರತಿವರ್ಷ ಪ್ರತಿಭಟನೆ ಮಾಡಿಯೇ ಲ್ಯಾಪಟಾಪ್ ಪಡೆಯುವ ಅನಿವಾರ್ಯತೆ ಎದುರಾಗಿದೆ.
ಹೌದು! ಪರಿಶಿಷ್ಟ ಜಾತಿ ಹಾಗೂ ಪಂಗಡದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಲ್ಯಾಪಟಾಪ್ ವಿತರಣೆ ಮಾಡುತ್ತದೆ. ಆದರೆ, ತಾನಾಗಿಯೇ ಸರ್ಕಾರವಾಗಲಿ ಅಥವಾ ವಿಶ್ವವಿದ್ಯಾಲಯವಾಗಲಿ ಒಂದೂ ದಿನ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ ಮಾಡಿಲ್ಲ. ಲ್ಯಾಪಟಾಪ್ ಪಡೆದುಕೊಳ್ಳಬೇಕು ಎಂದರೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನೇ ಮಾಡಬೇಕು.
ಸೋಮವಾರ ಕೂಡ ವಿದ್ಯಾರ್ಥಿಗಳು ಲ್ಯಾಪಟಾಪ್‌ಗಾಗಿ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಧರಣಿ ನಡೆಸಿದರು. ಇದರಲ್ಲಿ ವಿಶ್ವವಿದ್ಯಾಲಯದ ತಪ್ಪು ಏನೂ ಇಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಅನುದಾನ ಬಂದಿಲ್ಲ ಎಂದು ಪ್ರಭಾರ ಕುಲಪತಿ ಡಾ.ಮಲ್ಲಿಕಾರ್ಜುನ ಪಾಟೀಲ ತಿಳಿಸಿದರು.
2020-21 ನೇ ಸಾಲಿನಿಂದ 2022-23 ನೇ ಸಾಲಿನ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ ಮಾಡಿಲ್ಲ. ವಿಶ್ವವಿದ್ಯಾಲಯ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ವಿದ್ಯಾರ್ಥಿ ಗಣೇಶ ಕಡೇಮನಿ ಹೇಳಿದರು.
ವಿಶ್ವವಿದ್ಯಾಲಯ ಲ್ಯಾಪಟಾಪ್ ಜೊತೆಗೆ ಶಿಷ್ಯವೇತನ ಹಾಗೂ ಕಿರು ಪ್ರಬಂಧಕ್ಕೆ ಹೆಚ್ಚಿನ ಸಹಾಯಧನ ನೀಡುವ ಕುರಿತು ಈ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಆದರೆ, ಕವಿವಿ ಮಾತ್ರ ಕ್ಯಾರೆ ಎಂದಿಲ್ಲ. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿ ಮುಂದುವರೆಯಲಿದೆ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.
Kshetra Samachara
09/05/2022 06:13 pm