ಧಾರವಾಡ: ವಾಹನ ತೊಳೆಯಲೆಂದು ಹೋದ ತಂದೆ, ಮಗ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗದಿಗೆಪ್ಪ ಅಂಗಡಿ (43) ಹಾಗೂ ರವಿ (14) ಅಂಗಡಿ ಎಂಬುವವರೇ ಕೆರೆಯಲ್ಲಿ ಮುಳುಗಿ ಸಾವಿಗೀಡಾದವರು.
ಟಂಟಂ ವಾಹನವನ್ನು ತೊಳೆಯಲೆಂದು ತಂದೆ, ಮಗ ಇಬ್ಬರೂ ಕೆರೆಗೆ ಹೋಗಿದ್ದರು. ಈ ವೇಳೆ ಮಗ ಕೆರೆಯಲ್ಲಿ ಸಿಲುಕಿ ಮುಳುಗುತ್ತಿದ್ದ. ಆತನನ್ನು ಉಳಿಸಲು ಹೋಗಿ ತಂದೆ ಕೂಡ ನೀರು ಪಾಲಾಗಿದ್ದಾನೆ. ಸ್ಥಳೀಯರಿಗೆ ಈ ವಿಷಯ ಗೊತ್ತಾದ ಕೂಡಲೇ ನೀರಲ್ಲಿ ಮುಳುಗಿದ ಇಬ್ಬರನ್ನೂ ಹೊರಗಡೆ ತೆಗೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಗದಿಗೆಪ್ಪ ಅಸುನೀಗಿದ್ದ. ಮಗ ರವಿ ನಿತ್ರಾಣ ಸ್ಥಿತಿ ತಲುಪಿದ್ದ. ಆತನನ್ನು ಕೂಡಲೇ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆತರಲಾಯಿತಾದರೂ ಮಾರ್ಗ ಮಧ್ಯೆ ರವಿ ಕೂಡ ಅಸುನೀಗಿದ್ದಾನೆ.
ಗದಿಗೆಪ್ಪ ಚಿಕ್ಕ ಟಂಟಂ ಇಟ್ಟುಕೊಂಡು ಬಾಡಿಗೆ ನಡೆಸುತ್ತಿದ್ದ. ಇದೇ ಆತನ ಕುಟುಂಬಕ್ಕೆ ಆಸರೆಯಾಗಿತ್ತು. ಆದರೆ, ಇದೀಗ ಈ ವಾಹನದ ಮಾಲೀಕನೇ ಧಾರುಣವಾಗಿ ಸಾವನ್ನಪ್ಪಿದ್ದು, ಇಡೀ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಇನ್ನು ಬಾಳಿ ಬದುಕಬೇಕಾದ ರವಿ ಉದಯಕ್ಕೂ ಮುನ್ನವೇ ಅಸ್ತಂಗತನಾಗಿದ್ದಾನೆ. ಗ್ರಾಮಸ್ಥರು ಎರಡೂ ಶವಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರ ಸಹಕಾರದೊಂದಿಗೆ ತೆಗೆದುಕೊಂಡು ಬಂದಿದ್ದರು. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/07/2022 02:10 pm