ಧಾರವಾಡ: ವೈದ್ಯಕೀಯ ಶಿಕ್ಷಣ ಪಡೆಯಲು ಧಾರವಾಡದಿಂದ ಉಕ್ರೇನ್ ದೇಶಕ್ಕೆ ಹೋಗಿದ್ದ ಧಾರವಾಡ ಮೆಹಬೂಬನಗರದ ಫೌಸಿಯಾ ಮುಲ್ಲಾ ಅವರು ಉಕ್ರೇನ್ ದೇಶ ಬಿಟ್ಟು ಇದೀಗ ರೊಮೇನಿಯಾ ದೇಶಕ್ಕೆ ಸುರಕ್ಷಿತವಾಗಿ ಬಂದು ತಲುಪಿದ್ದಾಳೆ.
ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಯುದ್ಧ ನಡೆಯುತ್ತಿರುವುದರಿಂದ ಇದರ ಮಧ್ಯೆ ಭಾರತದ ಅನೇಕ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಆಪರೇಶನ್ ಗಂಗಾ ಮೂಲಕ ಏರ್ ಲಿಫ್ಟ್ ಕೂಡ ಮಾಡುತ್ತಿದೆ. ಕರ್ನಾಟಕದ ಅನೇಕ ಜನ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು, ಆ ಪೈಕಿ ಫೌಸಿಯಾ ಮುಲ್ಲಾ ಕೂಡ ಒಬ್ಬಳಾಗಿದ್ದಾಳೆ.
ಇದೀಗ ಭಾರತದ ಅನೇಕ ಜನ ವಿದ್ಯಾರ್ಥಿಗಳನ್ನು ಉಕ್ರೇನ್ ದೇಶದಿಂದ ರೊಮೇನಿಯಾ ದೇಶಕ್ಕೆ ತಂದು ಬಿಡಲಾಗುತ್ತಿದ್ದು, ಫೌಸಿಯಾ ಕೂಡ ಆ ವಿದ್ಯಾರ್ಥಿಗಳೊಂದಿಗೆ ರೊಮೇನಿಯಾ ದೇಶಕ್ಕೆ ಸುರಕ್ಷಿತವಾಗಿ ಬಂದಿದ್ದು, ಅಲ್ಲಿಂದ ಏರ್ ಲಿಫ್ಟ್ ನಡೆಯಲಿದೆ. ಬೆಳಿಗ್ಗೆ ಉಕ್ರೇನ್‌ನಲ್ಲಿದ್ದ ಭಾರತ ವಿದ್ಯಾರ್ಥಿಗಳನ್ನು ಉಕ್ರೇನ್ ಗಡಿ ಭಾಗಕ್ಕೆ ತಂದು ಬಿಡಲಾಗಿತ್ತು. ಅಲ್ಲಿಂದ 20 ಕಿಲೋ ಮೀಟರ್ ದೂರ ನಡೆದುಕೊಂಡೇ ವಿದ್ಯಾರ್ಥಿಗಳು ರೊಮೇನಿಯಾ ದೇಶಕ್ಕೆ ಬಂದು ತಲುಪಿದ್ದಾರೆ. ಬೆಳಿಗ್ಗೆ ವೀಡಿಯೋ ಕಾಲ್ ಮುಖಾಂತರ ಫೌಸಿಯಾ ತಮ್ಮೊಂದಿಗೆ ಮಾತನಾಡಿರುವುದಾಗಿ ಫೌಸಿಯಾ ತಂದೆ ಮಹ್ಮದ್ ಇಸಾಕ್ ಮುಲ್ಲಾ ತಿಳಿಸಿದರು.
ಮಾರ್ಚ್ 21 ರಂದು ಫೌಸಿಯಾ ಅವರ ಅಣ್ಣನ ಮದುವೆ ಸಮಾರಂಭ ನಡೆಯಲಿದ್ದು, ಫೌಸಿಯಾ ಬಂದ ಮೇಲೆಯೇ ಕುಟುಂಬಸ್ಥರು ಲಗ್ನ ಪತ್ರಿಕೆ ಹಂಚಿಕೆ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಲಗ್ನ ಪತ್ರಿಕೆಗಳೂ ಮುದ್ರಣಗೊಂಡಿದ್ದು, ಫೌಸಿಯಾ ಉಕ್ರೇನ್‌ನಲ್ಲಿ ಸಿಲುಕಿದ್ದರಿಂದ ಕುಟುಂಬಸ್ಥರು ಪತ್ರಿಕೆಗಳನ್ನು ಹಂಚಿರಲಿಲ್ಲ. ಈಗ ಫೌಸಿಯಾ ರೊಮೇನಿಯಾಕ್ಕೆ ಬಂದಿದ್ದು, ಕುಟುಂಬಸ್ಥರಲ್ಲಿ ಕೊಂಚ ಆತಂಕ ದೂರವಾದಂತಾಗಿದೆ. ಏನೇ ಆಗಲಿ ಫೌಸಿಯಾ ಬೇಗನೇ ಸುರಕ್ಷಿತವಾಗಿ ವಾಪಸ್ ತನ್ನ ಮನೆಗೆ ಬರಲಿ ಎಂಬುದೇ ನಮ್ಮ ಹಾರೈಕೆ.
Kshetra Samachara
01/03/2022 09:26 pm