ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ, ಮಹಾರಾಷ್ಟ್ರ ಪ್ರಯಾಣಿಕರ ಮೇಲೆ ನಿಗಾವಹಿಸಲು ವಿಶೇಷ ತಂಡಗಳ ರಚನೆ

ಧಾರವಾಡ: ಕೋವಿಡ್-19 ರ 2ನೇ ಅಲೆ ರಾಷ್ಟ್ರದಲ್ಲಿ ಆರಂಭವಾಗಿದ್ದು, ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದಿಂದ ರಸ್ತೆ, ರೈಲು ಮತ್ತು ವಿಮಾನದ ಮೂಲಕ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ವರದಿಯನ್ನು ಹೊಂದಿರಬೇಕೆಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದು, ಇದನ್ನು ಪ್ರಯಾಣಿಕ ಮತ್ತು ಪ್ರಯಾಣಿಕರನ್ನು ಹೊತ್ತು ತರುವ ಸಂಚಾರಿ ವಾಹನಗಳ ನಿರ್ವಾಹಕರು ಮತ್ತು ಮಾಲೀಕರು ಪಾಲಿಸುವುದು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ, ಮಾಸ್ಕ್ ಧರಿಸದವರಿಂದ ದಂಡ ಸಂಗ್ರಹ ಮತ್ತು ಮದುವೆ, ಸಭೆ, ಸಮಾರಂಭಗಳಿಗೆ ಮಾರ್ಷಲ್‍ಗಳ ನೇಮಕಾತಿ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿನಿತ್ಯ ಮಹಾರಾಷ್ಟ್ರ ರಾಜ್ಯದಿಂದ ಬಸ್, ರೈಲು, ಲಾರಿ ಮೂಲಕ ಹಾಗೂ ಕೇರಳ ರಾಜ್ಯದಿಂದ ವಿಮಾನದ ಮೂಲಕ ಜಿಲ್ಲೆಗೆ ಪ್ರಯಾಣಿಕರು ಆಗಮಿಸುತ್ತಾರೆ. ಈ ಕುರಿತು ನಿಯಮ ಪಾಲನೆಗಳ ಪರಿಶೀಲನೆಗೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಜರುಗಿಸಲು ಎಸಿಪಿ, ಡಿವೈಎಸ್‍ಪಿ, ಪಾಲಿಕೆಯ ವಲಯ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡದ ಸದಸ್ಯರು ಮಹಾರಾಷ್ಟ್ರದಿಂದ ಬರುವ ಕೆಎಸ್‍ಆರ್ ಟಿಸಿ ಮತ್ತು ಖಾಸಗಿ ಬಸ್ ನಿರ್ವಾಹಕರು ಕೊರೊನಾ ನೆಗೆಟಿವ್ ವರದಿಯನ್ನು ಹೊಂದಿರದ ಪ್ರಯಾಣಿಕರನ್ನು ಕರೆದುಕೊಂಡು ಬಂದಿದ್ದರೆ ಅಂತಹವರ ಮೇಲೆ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಅಂತಹ ಬಸ್‍ಗಳನ್ನು ಮುಟ್ಟುಗೋಲು ಹಾಕಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಎಚ್ಚರಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಈಗಾಗಲೇ ಬಸ್‍ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯಿಂದ ಪ್ರತಿ ದಿನ ಗಂಟಲು ದ್ರವ ಸಂಗ್ರಹಕ್ಕೆ ವಾಹನಗಳನ್ನು ನಿಲ್ಲಿಸಲಾಗಿದೆ. ಮತ್ತು ಶೀಘ್ರದಲ್ಲಿ ಲಾರಿಗಳು, ಖಾಸಗಿ ಬಸ್‍ಗಳು ನಿಲ್ಲುವ ಸ್ಥಳಗಳಲ್ಲಿ ಮತ್ತು ರೈಲು ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ವಿಶೇಷ ತಂಡಗಳನ್ನು ನೇಮಿಸಿ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುವುದೆಂದು ಅವರು ಹೇಳಿದರು.

ಸಾರ್ವಜನಿಕರು ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಹಾಗೂ ನಿಯಮ ಪಾಲಿಸದವರ ವಿರುದ್ಧ ದಂಡ ವಿಧಿಸುವ ಕ್ರಮವನ್ನು ಕಠಿಣಗೊಳಿಸಬೇಕೆಂದು ಪೊಲೀಸ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸರ್ಕಾರದ ಸೂಚನೆಯಂತೆ ಜಿಲ್ಲೆಯ ಗ್ರಾಮೀಣ ಪ್ರದೇಶ ಹಾಗೂ ಮಹಾನಗರ ವ್ಯಾಪ್ತಿಯಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಈ ಕುರಿತು ಸ್ಥಾನಿಕವಾಗಿ ಹಾಜರಿದ್ದು ಪರಿಶೀಲಿಸಲು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲಿಯೇ ದಂಡ ವಿಧಿಸಲು ಮಾರ್ಷಲ್‍ಗಳನ್ನು ತಕ್ಷಣ ನೇಮಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

Edited By : Nirmala Aralikatti
Kshetra Samachara

Kshetra Samachara

24/02/2021 07:45 pm

Cinque Terre

13 K

Cinque Terre

1

ಸಂಬಂಧಿತ ಸುದ್ದಿ