ವರದಿ: ನಾಗರಾಜ ತಳುಗೇರಿ
ಹುಬ್ಬಳ್ಳಿ: ಗುಡ್ಡ ಅಗೆದು ಇಲಿ ಹಿಡಿದ್ರು ಅಂತಾರಲ್ಲ... ಹಾಗೆ ಗುಡ್ಡ ಅಗೆದು ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ ಕಟ್ಟಿದಂತೆ ಆಯ್ತಾ?
ಈ ಸುದ್ದಿ ನೋಡಿದ್ರೆ ನಿಮಗೂ ಹೀಗೆ ಅನ್ಸುತ್ತೆ. ಪ್ರಯಾಣಿಕರಿಗೆ ಅನುಕೂಲ ಆಗಲಿ ಅಂತ ಜನರ ತೆರಿಗೆ ಹಣದಲ್ಲಿ ಕೋಟಿಗಟ್ಟಲೇ ಖರ್ಚು ಮಾಡಿ ಹುಬ್ಬಳ್ಳಿಯ ಹೊಸೂರಿನಲ್ಲಿ ಬಸ್ ನಿಲ್ದಾಣ ಕಟ್ಟಿದ್ದಾರೆ. ಆದ್ರೆ ಮಳೆ ಬಂದಾಗ ಅಲ್ಲಿನ ಪರಿಸ್ಥಿತಿ ಹೇಳತೀರದ್ದು.
ಬಸ್ ನಿಲ್ದಾಣ ಉದ್ಘಾಟನೆಯಾಗಿ ಹೆಚ್ಚು ಕಡಿಮೆ ಇನ್ನೂ ಒಂದು ವರ್ಷ ಪೂರ್ಣಗೊಂಡಿಲ್ಲ. ಆದ್ರೆ ಈ ಬಸ್ ನಿಲ್ದಾಣದ ಛಾವಣಿ ಈಗಾಗಲೇ ಸೋರುತ್ತಿದೆ. ಪರಿಣಾಮ ಪ್ಲಾಟ್ ಫಾರಂನಲ್ಲಿ ನೀರು ನಿಲ್ಲುತ್ತೆ. ಅಷ್ಟೇ ಯಾಕ್ರೀ? ಬಸ್ ನಿಲ್ಲುವ ಜಾಗವಂತೂ ವಿಶಾಲ ಕೆರೆಯಂತೆ ಕಾಣುತ್ತೆ. ಹಾಗಾದ್ರೆ ಮಳೆ ನೀರು ಹೊರ ಹೋಗಲು ವ್ಯವಸ್ಥೆ ಮಾಡಿಲ್ವಾ ಅನ್ನುವ ಪ್ರಶ್ನೆ ಮೂಡುತ್ತೆ.
ಹೀಗೆ ಎಲ್ಲೆಂದರಲ್ಲಿ ನೀರು ನಿಂತ ಪರಿಣಾಮ ಪ್ರಯಾಣಿಕರು ಯಪ್ಪಾ ಎಲ್ಲಿ ಬೀಳುತ್ತೇನೋ ಎಂಬ ಭೀತಿಯಲ್ಲಿ ನಿಧಾನವಾಗಿ ರಾಜಗಾಂಭೀರ್ಯದ ಹೆಜ್ಜೆ ಹಾಕಬೇಕಿದೆ.
ಇನ್ನು ಬಸ್ ನಿಲ್ದಾಣದ ಮುಖ್ಯ ದ್ವಾರದಿಂದ ಪ್ಲಾಟ್ ಫಾರಂಗೆ ಬರಲು ಮೆಟ್ಟಿಲುಗಳಿವೆ. ಇವತ್ತು ಧೋ ಧೋ ಎಂದು ಸುರಿದ ಮಳೆಯ ಪರಿಣಾಮ ಮೆಟ್ಟಿಲ ಮೇಲೂ ನೀರು ಆವರಿಸಿತ್ತು. ಇದೇ ವೇಳೆ ಹಿರಿಯ ನಾಗರಿಕರು ಮೆಟ್ಟಿಲು ಇಳಿಯುವಾಗ ಜಾರಿ ಬಿದ್ದರೆಂದು ಪ್ರತ್ಯಕ್ಷದರ್ಶಿಗಳು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
ಇದಷ್ಟೇ ಅಲ್ಲ. ಮಳೆ ಬಂದಾಗ ಇಡೀ ಫ್ಲಾಟ್ ಫಾರಂಗಳಲ್ಲಿ ಕರೆಂಟೇ ಇರಲಿಲ್ಲ. ಮಳೆ ಬಂದಾಗ ಕರೆಂಟ್ ಹೋಗೋದು ಕಾಮನ್. ಆದ್ರೆ ಮೆಟ್ಟಿಲುಗಳಲ್ಲಿ, ಅಥವಾ ಪ್ಯಾಸೇಜ್ ಗಳಲ್ಲಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕಲ್ಲವೇ?
Kshetra Samachara
08/01/2021 09:12 pm