ಹುಬ್ಬಳ್ಳಿ : ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ವ್ಯಾಪಾರಸ್ಥರ ಸಂಘ ಹಾಗೂ ಸಮತಾಸೇನೆ ಸಂಘಟನೆ ವತಿಯಿಂದ ನಗರದ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರುಗಡೆ ಪ್ರತಿಭಟನೆ ನಡೆಯಿತು.
ಕಳೆದ ಎಂಟು ತಿಂಗಳಿನಿಂದ ಕೊರೊನಾ ಹಿನ್ನೆಲೆ ಆರ್ಥಿಕ ಸಂಕಷ್ಟದ ನಡುವೆಯೂ ಬೀದಿ ಬದಿ ವ್ಯಾಪಾರಸ್ಥರು ದಿನಕ್ಕೆ ನೂರರಿಂದ ನಾಲ್ಕು ನೂರು ರೂಪಾಯಿ ದುಡಿದು ಬದುಕುತ್ತಿದ್ದಾರೆ.
ಆದರೆ ಪಾಲಿಕೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
ಅಷ್ಟೇ ಅಲ್ಲದೆ ವ್ಯಾಪಾರಕ್ಕೆ ಸ್ಥಳಾವಕಾಶ ನೀಡಿಲ್ಲ. ನಮ್ಮ ಸಾಮಗ್ರಿಗಳನ್ನು ವಶಕ್ಕೆ ಪಡೆದು ನಾಶ ಮಾಡುತ್ತಿದ್ದಾರೆ.
ನಮ್ಮ ವಸ್ತುಗಳಿಗೆ ಬೇಕಾಬಿಟ್ಟಿ ದಂಡ ವಿಧಿಸುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ಬದಿ ವ್ಯಾಪಾರಸ್ಥರಿಗೆ ಕಿರುಕುಳ ನೀಡುತ್ತಿರುವ ಪಾಲಿಕೆ ಅಧಿಕಾರಿಯನ್ನು ವಜಾಗೊಳಿಸಿ ಕೂಡಲೇ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
Kshetra Samachara
05/01/2021 01:16 pm