ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಿಲ್ಲೆಯ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಶೇ.100 ರಷ್ಟು ಮೊದಲ ಡೋಸ್ ಕಂಪ್ಲೀಟ್

ಹುಬ್ಬಳ್ಳಿ: ಕೋವಿಡ್ ವಿರುದ್ಧದ ಹೋರಾಟಕ್ಕೆ ಲಸಿಕಾಕರಣ ಪ್ರಮುಖ ಅಸ್ತ್ರವಾಗಿದೆ.ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಲಸಿಕೆ ಪೂರಕವಾಗಿದೆ.ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕಾಕರಣ ಕಾರ್ಯ ಪ್ರಗತಿಯಲ್ಲಿದ್ದು, ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಶೇ.100 ರಷ್ಟು ಮೊದಲ ಡೋಸ್ ಲಸಿಕೆ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಾದ್ಯಂತ ಈ ವರೆಗೆ 13,58,894 ಜನರಿಗೆ ಲಸಿಕೆ ನೀಡಿದ್ದು ಶೇ.94 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ ನಗರದ ಮಹಾನಗರಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ, ಕಲಘಟಗಿ ತಾಲೂಕು ಮುಕ್ಕಲ್ , ಅಣ್ಣಿಗೇರಿ ತಾಲೂಕಿನ ಶಲವಡಿ ಹಾಗೂ ಧಾರವಾಡ ತಾಲೂಕಿನ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಮ್ಮ ವ್ಯಾಪ್ತಿಯಲ್ಲಿ ಶೇ.100 ರಷ್ಟು ಮೊದಲ ಡೋಸ್ ಲಸಿಕೆ ನೀಡಿವೆ. ಜಿಲ್ಲೆಯಾದ್ಯಂತ ಒಟ್ಟು 14,44,000 ಜನ ಅರ್ಹರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ.ಕಳೆದ ಜನವರಿ 16 ರಿಂದ ನಿನ್ನೆ ಡಿಸೆಂಬರ್ 07 ರವರೆಗೆ 13,58,894 ಜನರಿಗೆ ಮೊದಲ ಡೋಸ್ ಲಸಿಕೆ ನೀಡಿ ಶೇ.94 ರಷ್ಟು ಗುರಿ ಸಾಧಿಸಲಾಗಿದೆ. 9,05,943 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಿ ಶೇ.74 ರಷ್ಟು ಪ್ರಗತಿ ಸಾಧಿಸಲಾಗಿದೆ.

ಹುಬ್ಬಳ್ಳಿ ನಗರದ ಕೇಶ್ವಾಪೂರ,ರಾಮನಗರ,ಬದಾಮಿ ನಗರ, ಶಬರಿ ನಗರ ,ಜೆ.ಸಿ.ನಗರ ಹಾಗೂ ದೇಶಪಾಂಡೆ ನಗರದ ಕೆಲವು ಭಾಗಗಳ ವ್ಯಾಪ್ತಿ ಹೊಂದಿರುವ ಚಿಟಗುಪ್ಪಿ ಆಸ್ಪತ್ರೆಯ ತಂಡಕ್ಕೆ 18 ವರ್ಷ ಮೇಲ್ಪಟ್ಟ ಅರ್ಹ 37,760 ಜನರಿಗೆ ಕೋವಿಡ್ ನಿರೋಧಕ ಲಸಿಕೆಯ ಗುರಿ ನೀಡಲಾಗಿತ್ತು.ಈವರೆಗೆ 39,427 ಜನರಿಗೆ ಮೊದಲ ಲಸಿಕೆ ನೀಡಿದ್ದು ಶೇ.100 ಕ್ಕಿಂತ ಅಧಿಕ ಸಾಧನೆ ಮಾಡಲಾಗಿದೆ.ಶೇ.85 ರಷ್ಟು ಎರಡನೇ ಡೋಸ್ ಲಸಿಕೆ ಕೂಡ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಲಸಿಕಾಕರಣದ ಮೊದಲ ದಿನದಿಂದಲೇ ತಂಡಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ.ಪ್ರತಿದಿನ ಹಂಚಿಕೆಯಾದ ಡೋಸ್‌ಗಳನ್ನು ಅದೇ ದಿನ ಅರ್ಹರಿಗೆ ನೀಡುವ ಕಾರ್ಯ ನಿರಂತರವಾಗಿ ನಡೆದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ.ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು,ಸಂಘ ಸಂಸ್ಥೆಗಳು ಕೂಡ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ ಎಂದು ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ ತಿಳಿಸಿದ್ದಾರೆ.

ಕಲಘಟಗಿ ತಾಲೂಕಿನ ಮುಕ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 17 ಹಳ್ಳಿಗಳಿವೆ.19,667 ಜನ ಅರ್ಹರಿಗೆ ಲಸಿಕೆ ನೀಡುವ ಗುರಿ ಇತ್ತು.19,980 ಜನರಿಗೆ ಮೊದಲ ಡೋಸ್ ಲಸಿಕೆ ನೀಡಿ ಶೇ.101.57 ರಷ್ಟು ಸಾಧನೆ ಮಾಡಲಾಗಿದೆ.11,680 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದ್ದು ಶೇ.58 ರಷ್ಟು ಪ್ರಗತಿ ಸಾಧಿಸಲಾಗಿದೆ.

ಲಸಿಕಾಕರಣದ ಯುವ ಉತ್ಸಾಹಿ ತಂಡವು ಲಸಿಕೆಯ ಮಾಹಿತಿ ನೀಡಿ, ಕೆಲವರಲ್ಲಿದ್ದ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಲು ಹೆಚ್ಚು ಒತ್ತು ನೀಡಲಾಯಿತು.ಸ್ಥಳೀಯ ಗ್ರಾ.ಪಂ ಮತ್ತು ಆರೋಗ್ಯ ಇಲಾಖೆಯು ಧ್ವನಿ ಸಂದೇಶಗಳನ್ನು ಮುದ್ರಿಸಿ ಪ್ರಚಾರ ಕೈಗೊಂಡ ಪರಿಣಾಮ ಈ ಕಾರ್ಯ ಸಾಧ್ಯವಾಗಿದೆ.ಬಹುತೇಕ ಹಳ್ಳಿಗಳಲ್ಲಿ ದುಡಿಯುವ ವರ್ಗ ಸಂಜೆ ಸಿಗುತ್ತಿದ್ದರಿಂದ ರಾತ್ರಿ 8-9 ಗಂಟೆಯವರೆಗೆ ಲಸಿಕೆಗಳನ್ನು ನೀಡಲಾಗಿದೆ ಎಂದು ಮುಕ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವಿ ಸೋಮಣ್ಣವರ ಹೇಳಿದ್ದಾರೆ.

ಧಾರವಾಡ ತಾಲೂಕಿನ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 27,672 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ.27,691 ಜನರಿಗೆ ಮೊದಲ ಡೋಸ್ ಲಸಿಕೆ ನೀಡಿ ಶೇ.100 ಕ್ಕಿಂತ ಅಧಿಕ ಸಾಧನೆ ಮಾಡಲಾಗಿದೆ.ಈಗಾಗಲೇ 17120 ಜನರಿಗೆ ಎರಡನೇ ಡೋಸ್ ಲಸಿಕೆಗಳನ್ನು ಕೂಡ ನೀಡಲಾಗಿದೆ ಎಂದು ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜಶೇಖರ ಪತ್ತಾರ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

08/12/2021 05:08 pm

Cinque Terre

41.03 K

Cinque Terre

1

ಸಂಬಂಧಿತ ಸುದ್ದಿ