ಹುಬ್ಬಳ್ಳಿ: ಅದು ನಿಜಕ್ಕೂ ಸಾಕಷ್ಟು ಜನಪ್ರೀಯತೆ ಪಡೆದಿರುವ ಸೇವೆ. ಅಲ್ಲದೇ ಅತಿ ಕಡಿಮೆ ಖರ್ಚಿನ ಸಾರಿಗೆ ಸೇವೆ. ಆ ಸೇವೆಯನ್ನು ಪಡೆದುಕೊಳ್ಳಲು ನೀವು ಹರಸಾಹಸವನ್ನೇ ಮಾಡಬೇಕಾಗಿದೆ. ನೀವು ಇಲ್ಲಿ ಸೇವೆಯ ಮೊತ್ತವನ್ನು ಭರಿಸಿದರೂ ಕೂಡ ಸೌಲಭ್ಯಗಳು ಮಾತ್ರ ಸರಿಯಾದ ರೀತಿಯಲ್ಲಿ ಲಭ್ಯವಾಗುತ್ತಿಲ್ಲ. ಹಾಗಿದ್ದರೇ ಯಾವುದು ಆ ಸೇವೆ ? ಅಲ್ಲಿ ಆಗಿರುವ ಅವ್ಯವಸ್ಥೆ ಆದರೂ ಏನು ಅಂತೀರಾ ? ಈ ಸ್ಟೋರಿ ನೋಡಿ.
ಭಾರತೀಯ ರೈಲ್ವೆ ವಲಯ ಬೇರೆ ಬೇರೆ ಸಾರಿಗೆ ಸೇವೆಗಳಿಗೆ ಹೋಲಿಸಿದರೇ ನಿಜಕ್ಕೂ ಸಾಕಷ್ಟು ಸುರಕ್ಷಿತ ಹಾಗೂ ಕಡಿಮೆ ಖರ್ಚಿನ ಜನಪ್ರಿಯ ಸೇವೆಯಾಗಿದೆ. ಇಲ್ಲಿ ಕಾಯ್ದಿರಿಸಿದ ಪ್ರಯಾಣದ ಸೌಕರ್ಯಗಳು ಮಾತ್ರ ಸರಿಯಾಗಿ ಲಭ್ಯವಿದೆ. ಆದರೆ ಇಲ್ಲಿ ಕಾಯ್ದಿರಿಸಿದೇ ಇರುವ ಹಾಗೂ ಜನರಲ್ ಕೋಟಾದ ಅಡಿಯಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಪರಿಸ್ಥಿತಿಯಂತೂ ಹೇಳ ತೀರದಾಗಿದೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್, ಧಾರವಾಡದಿಂದ ಮೈಸೂರು ಪ್ರಯಾಣ ಬೆಳೆಸುವ ಬಸವ ಎಕ್ಸ್‌ಪ್ರೆಸ್ ಸೇರಿದಂತೆ ಬಹುತೇಕ ರೈಲಿನಲ್ಲಿ ಪ್ರಯಾಣಿಕರು ಪ್ರಯಾಣ ಮಾಡಲು ಸಾಹಸ ಮಾಡಬೇಕಾಗಿದೆ. ರಾತ್ರಿ ಪ್ರಯಾಣ ಮಾತ್ರವಲ್ಲದೆ ಹಗಲು ಹೊತ್ತಿನಲ್ಲಿ ಪ್ರಯಾಣಿಸುವ ರೈಲುಗಳ ಜನರಲ್ ಬೋಗಿಗಳಲ್ಲಿ ಸರಿಯಾದ ರೀತಿಯಲ್ಲಿ ಆಸನದ ವ್ಯವಸ್ಥೆ ಇಲ್ಲದೇ ಜನರು ಎಲ್ಲೆಂದರಲ್ಲಿ ಕುಳಿತುಕೊಂಡು ಹಾಗೂ ನಿಂತುಕೊಂಡು ಪ್ರಯಾಣ ಬೆಳೆಸುವಂತಾಗಿದೆ. ಬೋಗಿಗಳ ನಿಗದಿತ ಮಿತಿಗಿಂತ ಜಾಸ್ತಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಅಲ್ಲದೆ ಬೋಗಿಗಳ ಕೊರತೆಯಿಂದ ಕೂಡ ಇಂತಹ ಅವ್ಯವಸ್ಥೆ ಗೋಚರಿಸುತ್ತಿದೆ.
ಇನ್ನೂ ಕೋವಿಡ್ ನಂತರದಲ್ಲಿ ರೈಲ್ವೆ ಪ್ರಯಾಣ ಸಹಜ ಸ್ಥಿತಿಯತ್ತ ಮರುಳುತ್ತಿದೆ. ಆದರೆ ಜನರ ಪ್ರಯಾಣ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರ ಅಗತ್ಯಕ್ಕಿಂತ ಕಡಿಮೆ ರೈಲ್ವೆ ಪ್ರಯಾಣ ಮಾಡುತ್ತಿರುವುದು ಹಾಗೂ ಅಗತ್ಯಕ್ಕಿಂತ ಕಡಿಮೆ ಕೋಚ್ ಗಳಿಂದ ಜನರು ನೂಕುನುಗ್ಗಲಿನಲ್ಲಿಯೇ ಓಡಾಡುವಂತಾಗಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಶೀಲನೆ ನಡೆಸಿ ಅವಶ್ಯಕತೆಗೆ ಅನುಗುಣವಾಗಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಸಾಕಷ್ಟು ಜನಪರ ಸೇವೆಗಳ ಮೂಲಕ ಜನಪ್ರೀಯತೆ ಪಡೆದಿರುವ ಭಾರತೀಯ ರೈಲ್ವೆ ಸಾರ್ವಜನಿಕರ ಸಮಸ್ಯೆ ಬಗೆಹರಿಸಿ ಸುರಕ್ಷಿತ ಪ್ರಯಾಣಕ್ಕೆ ಒತ್ತನ್ನು ನೀಡಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯವಾಗಿದೆ.
Kshetra Samachara
18/05/2022 05:11 pm