ಹುಬ್ಬಳ್ಳಿ: ಅದು ಸಾಕಷ್ಟು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ ಪಾಲಿಕೆ.ಇಂದು ಕೋಟ್ಯಾಂತರ ರೂಪಾಯಿ ವೆಚ್ಚದ ಹೆಸರಲ್ಲಿ ಸರ್ಕಾರದ ಹಣವನ್ನು ಪೋಲು ಮಾಡುತ್ತಿದೆ. ಜನಪರ ಕಾಳಜಿ ತೋರುವ ಪಾಲಿಕೆ ಜನರ ಆರೋಗ್ಯಕ್ಕೆ ಮಾರಕವಾಗಿದೆ. ಅರೇ ಇಲ್ಲಿ ಆಗಿದ್ದಾದರೂ ಏನು ಅಂತೀರಾ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಹಗರಣದ ಎರಡನೇ ಅಧ್ಯಾಯ.
ಹೀಗೆ ಧಗಧಗನೆ ಹೊತ್ತಿ ಉರಿಯುತ್ತಿರುವ ಮಹಾನಗರ ಪಾಲಿಕೆಯ ಕಸದ ಡಂಪಿಂಗ್ ಯಾರ್ಡ್. ಆಕಾಶದೆತ್ತರಕ್ಕೆ ಹರಡಿರುವ ವಿಷಕಾರಿ ಕಾರ್ಬನ್. ವಾತಾವರಣದಲ್ಲಿ ಹರಡುವ ವಿಷಗಾಳಿ ಸೇವಿಸುತ್ತ ನಿತ್ಯ ನರಕ ಅನುಭವಿಸುತ್ತಿರುವ ಜನರು. ಇಂತಹದೊಂದು ನರಕ ಸದೃಶಕ್ಕೆ ಸಾಕ್ಷಿಯಾಗಿರೋದು ವಾಣಿಜ್ಯ ನಗರಿ ಹುಬ್ಬಳ್ಳಿಯ ಘನ ತ್ಯಾಜ್ಯ ನಿರ್ವಹಣೆ ಘಟಕ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಿತ್ಯ ನಗರದ ವಿವಿಧ ವಾರ್ಡ್ ಗಳಿಂದ ಸಂಗ್ರಹಿಸಿದ ಹತ್ತಾರು ಟನ್ ಕಸವನ್ನು ಇಲ್ಲಿ ತಂದು ಸುರಿಯುತ್ತೆ. ಹೀಗೆ ಸುರಿದ ಕಸವನ್ನು ಬೇರ್ಪಡಿಸಿ, ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು.ಕೇವಲ ದಾಖಲೆಗಳಲ್ಲಿ ಮಾತ್ರ ಘನ ತ್ಯಾಜ್ಯ ನಿರ್ವಹಣೆಯ ನಾಟಕವಾಡುತ್ತಿದೆ ಪಾಲಿಕೆ.ವಾಸ್ತವದಲ್ಲಿ ಅದ್ಯಾವುದೂ ಇಲ್ಲಿ ನಡೆಯುತ್ತಿಲ್ಲ. ನಿತ್ಯ ತಂದು ಸುರಿವ ಕಸದ ರಾಶಿ ದೊಡ್ಡದಾಗಿ ಬೆಳೆಯುತ್ತಿದ್ದಂತೆ ಅದಕ್ಕೆ ಬೆಂಕಿ ಹಚ್ಚಿ ಸುಡುವ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.
ಇದು ಒಂದೆರಡು ದಿನದ ಕಥೆಯಲ್ಲ. ನಿತ್ಯವೂ ಇಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಪರಿಸರ, ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಹಿರಿಯ ವೈದ್ಯರು ಏನಂತಾರೇ ಕೇಳಿ.
ಇನ್ನೂ ನಗರದ ವಿವಿಧ ವಾರ್ಡ್ ಗಳಿಂದ ಸಂಗ್ರಹಿಸಿದ ಕಸವನ್ನು ಹಸಿ ಒಣ ಕಸವನ್ನು ಸರಿಯಾಗಿ ಬೇರ್ಪಡಿಸಿ, ಬಳಿಕ ಅದನ್ನು ಕಾಂಪೋಸ್ಟ್ ಅಥವಾ ಪುನರ್ಬಳಕೆ ಮೂಲಕ ನಿರ್ವಹಣೆ ಮಾಡುವ ಭರವಸೆ ಮಹಾನಗರ ಪಾಲಿಕೆ ನೀಡಿತ್ತು. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಗರದ ಎರಡು ಮೂರು ಸ್ಥಳಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಘಟಕಗಳನ್ನು ಸ್ಥಾಪಿಸಿ ಜನರಲ್ಲಿ ಭರವಸೆ ಮೂಡಿಸಿತ್ತು. ಇಂದಿಗೂ ವೈಜ್ಞಾನಿಕವಾಗಿ ಕಸದ ನಿರ್ವಹಣೆ ನಡೆಯುತ್ತಿಲ್ಲ. ಕಸಕ್ಕೆ ಬೆಂಕಿ ಹಚ್ಚಿ ನಿರ್ವಹಣೆ ಮಾಡಲಾಗುತ್ತಿದೆ. ಇನ್ನಾದರು ಪಾಲಿಕೆ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡಲಿ ಎಂಬುವುದು ಜನರ ಒತ್ತಾಸೆಯಾಗಿದೆ.
Kshetra Samachara
10/03/2022 02:57 pm