ಧಾರವಾಡದ ಲೋಕೋಪಯೋಗಿ ಇಲಾಖೆಯಿಂದ ನಡೆಸಲಾಗುವ ವಿವಿಧ ಕಾಮಗಾರಿಗಳಲ್ಲಿ ಪ್ಯಾಕೇಜ್ ಪದ್ಧತಿ ಅಳವಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು! 30 ಲಕ್ಷ, 20 ಲಕ್ಷ ಹಾಗೂ 10 ಲಕ್ಷ ರೂಪಾಯಿ ವೆಚ್ಚದ ಬೇರೆ ಬೇರೆ ಕಾಮಗಾರಿಗಳನ್ನು ಒಟ್ಟುಗೂಡಿಸಿ 50 ಲಕ್ಷ ಮೀರಿ ಒಂದೇ ಕಾಮಗಾರಿಯನ್ನಾಗಿ ಮಾಡಿ ಆ ಮೂಲಕ ಪ್ಯಾಕೇಜ್ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರು 50 ಲಕ್ಷ ರೂಪಾಯಿ ಮೀರಿ ಗುತ್ತಿಗೆ ಕೆಲಸಕ್ಕೆ ಟೆಂಡರ್ ಹಾಕಲು ಬರುವುದಿಲ್ಲ. ಆದರೆ, ಇಲ್ಲಿ ಪ್ಯಾಕೇಜ್ ಮಾಡುವ ಮೂಲಕ ಉದ್ದೇಶ ಪೂರ್ವಕವಾಗಿಯೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರನ್ನು ಟೆಂಡರ್‌ನಿಂದ ಹೊರಗಿಡುವ ಹುನ್ನಾರ ನಡೆದಿದೆ. ಕೂಡಲೇ ಈ ಪದ್ಧತಿ ಕೈ ಬಿಡಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪಿಡಬ್ಲುಡಿ ಮುಖ್ಯ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ 50 ಲಕ್ಷ ಮೀರದಂತೆ ಟೆಂಡರ್ ಕರೆಯಬೇಕು ಎಂಬ ಸರ್ಕಾರದ ನಿಯಮವಿದೆ. ಆದರೆ, ಅಧಿಕಾರಿಗಳು ಈ ನಿಯಮವನ್ನು ಪಾಲಿಸದೇ ಮೋಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಲು ಹೋದರೆ ನಿಮ್ಮ ಶಾಸಕರೇ ಈ ರೀತಿ ಪ್ಯಾಕೇಜ್ ಮಾಡಲು ಹೇಳಿದ್ದಾರೆ ಎಂಬ ಉತ್ತರ ಕೊಡುತ್ತಿದ್ದಾರೆ. ಕೂಡಲೇ ಈ ಪ್ಯಾಕೇಜ್ ಪದ್ಧತಿ ಕೈ ಬಿಡದೇ ಹೋದಲ್ಲಿ ಮಾ.9ನೇ ತಾರೀಖಿನಿಂದ ಪಿಡಬ್ಲುಡಿ ಕಚೇರಿ ಎದುರೇ ಧರಣಿ ಕುಳಿತುಕೊಳ್ಳುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.
Kshetra Samachara
08/03/2022 11:39 am