ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ಪ್ರತಿ ವರ್ಗಕ್ಕೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಏಕರೂಪ ಮಾದರಿ ಅಳವಡಿಸಲು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ.
ಧಾರವಾಡದ ಸುಭಾಷ ರಸ್ತೆಗೆ ಹೊಂದಿಕೊಂಡಿರುವ ಹಾಲಗೆರೆ ಅಂಗಳದಲ್ಲಿರುವ ಸೂಪರ್ ಮಾರುಕಟ್ಟೆ ಅವ್ಯವಸ್ಥಿತವಾಗಿತ್ತು. ಬಹಳಷ್ಟು ಸ್ಥಳಗಳು ಹಲವು ವರ್ಷಗಳಿಂದ ಕೆಲವರ ಬಿಗಿ ಹಿಡಿತದಲ್ಲಿದ್ದವು ಎಂಬ ಆರೋಪಗಳೂ ಕೇಳಿ ಬಂದಿದ್ದವು. ಮಾರುಕಟ್ಟೆ ಸ್ವರೂಪವನ್ನು ವ್ಯವಸ್ಥಿತಗೊಳಿಸಿ ಎಲ್ಲರಿಗೂ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಮಾರುಕಟ್ಟೆಯನ್ನು ಮರು ವಿನ್ಯಾಸಗೊಳಿಸಲಾಗುತ್ತಿದೆ.
ಅದರ ಭಾಗವಾಗಿ ಮಾರುಕಟ್ಟೆಯಲ್ಲಿ ತರಕಾರಿ ಚಿಲ್ಲರೆ ವಹಿವಾಟಿಗೆ ಅನುಕೂಲವಾಗುವಂತೆ ಕಟ್ಟೆಗಳನ್ನು ನಿರ್ಮಿಸಿ ಹಂಚಲು ಪಾಲಿಕೆ ಸಿದ್ಧತೆ ನಡೆಸಿದೆ. ಮಾರುಕಟ್ಟೆ ಒಳಗೆ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಪೂರ್ಣಗೊಂಡಿದೆ.
ಪ್ರತಿ ವ್ಯಾಪಾರಿಗೆ 5X5 ಅಡಿಯ ಜಾಗದಂತೆ 650 ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಯೋಜನೆ ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಯೋಜನೆಗೆ ಚಾಲನೆ ದೊರೆತಿದ್ದು, ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಹೊರೆಯಾಗದಂತೆ ಮತ್ತು ಪ್ರತಿಯೊಬ್ಬರಿಗೂ ಅವಕಾಶ ಸಿಗುವಂತೆ ಮಾಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದು ಅಲ್ಲಿನ ವ್ಯಾಪಾರಿಗಳಿಗೂ ಖುಷಿ ತಂದಿದೆ.
ಹಳೇ ಮಾರುಕಟ್ಟೆ ಸಾಕಷ್ಟು ಇಕ್ಕಟ್ಟಾಗಿತ್ತು. ತ್ಯಾಜ್ಯ ನಿರ್ವಹಣೆಗೂ ಕಷ್ಟವಾಗಿತ್ತು. ವ್ಯಾಪಾರಿಗಳಿಗೆ ಸರಿಯಾದ ಜಾಗ ಇರಲಿಲ್ಲ. ಗ್ರಾಹಕರಿಗೂ ಓಡಾಡುವುದು ಕಷ್ಟವಾಗಿತ್ತು. ಹೀಗಾಗಿ ವ್ಯವಸ್ಥಿತ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಜನತೆ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ 5 ರಿಂದ 8 ಗುಂಟೆ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ ಅಲ್ಲಿ ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸುವ ಪೈಲಟ್ ಯೋಜನೆಗೂ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಸದ್ಯ ಮಾರುಕಟ್ಟೆ ಜಾಗದಲ್ಲಿ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿ ಅಲ್ಲಿ ಕುಡಿಯುವ ನೀರು, ತರಕಾರಿ ತೊಳೆಯಲು ಸರಿಯಾದ ವ್ಯವಸ್ಥೆ, ವ್ಯಾಪಾರಸ್ಥರಿಗೆ ಕಟ್ಟೆ ಹಾಗೂ ನೆರಳಿನ ವ್ಯವಸ್ಥೆಗೆ ಪಾಲಿಕೆ ಎಂಜಿನಿಯರ್‌ಗಳು ಯೋಜನೆ ರೂಪಿಸುತ್ತಿದ್ದಾರೆ.
Kshetra Samachara
27/04/2022 04:06 pm