ಹುಬ್ಬಳ್ಳಿ: ಅದು ನಿಜಕ್ಕೂ ಹೂಬಳ್ಳಿಯ ಶಾಂತಿ ತೋಟವನ್ನು ಹಾಳು ಮಾಡಿದ್ದ ಪ್ರಕರಣ. ಈ ಪ್ರಕರಣದಲ್ಲಿ ನೂರಾರು ಜನರನ್ನು ಬಂಧನ ಮಾಡಲಾಗಿದೆ. ಆದರೆ ಇಲ್ಲೊಂದು ಸಂಸ್ಥೆ ಗಲಭೆಕೋರರ ಬೆನ್ನಿಗೆ ನಿಂತು ರಕ್ಷಣೆ ನೀಡಲು ಮುಂದಾಗಿದೆ.
ಹಳೇಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ ನೂರಕ್ಕೂ ಹೆಚ್ಚು ಆರೋಪಿಗಳಿಗೆ ಜಾಮೀನು ಕೊಡಿಸಿ, ನೀತಿ ಬೋಧನೆ ಮಾಡಲು ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಸಿದ್ಧತೆ ನಡೆಸಿದೆ. ಹೌದು, ಬಂಧಿತ ಪಾಲಕರ ಜೊತೆ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಚರ್ಚಿಸಿ, ವಕೀಲರ ಮೂಲಕ ಅಗತ್ಯ ಮಾಹಿತಿ ಹಾಗೂ ಕಾಗದ ಪತ್ರ ಸಂಗ್ರಹಿಸಲಾಗುತ್ತಿದೆ.
ಏ.30ಕ್ಕೆ ಜಾಮೀನು ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಗಲಭೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ, ಆ ಸಂದರ್ಭದ ವಿಡಿಯೊ ಹಾಗೂ ಮೊಬೈಲ್ ಕರೆ ಆಧರಿಸಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು 154 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಬಹುತೇಕರು ಆನಂದ ನಗರ, ಟಿಪ್ಪು ನಗರ, ನೂರಾನಿ ಪ್ಲಾಟ್, ಅಧ್ಯಾಪಕ ನಗರ, ಮೇದಾರ ಓಣಿ, ಚನ್ನಪೇಟೆ, ಬೀರಬಂದರ ಓಣಿ ಸೇರಿದಂತೆ ಹಳೇ ಹುಬ್ಬಳ್ಳಿಯ ಭಾಗದವರೇ ಆಗಿದ್ದಾರೆ.
ಭದ್ರತೆ ಹಿನ್ನೆಲೆಯಲ್ಲಿ ಅವರನ್ನೆಲ್ಲ ಕಲಬುರಗಿ, ಬಳ್ಳಾರಿ ಮತ್ತು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಕೊಡಿಸಲು ಅಂಜುಮನ್ ಇಸ್ಲಾಂ ಸಂಸ್ಥೆ ಮುಂದಾಗಿದೆ.
ಇನ್ನೂ ನೈತಿಕ ಪಾಠ ಹೇಳುವ ಕೆಲಸವನ್ನು ಇಪ್ಪತ್ತು ವರ್ಷಗಳಿಂದ ಸಂಸ್ಥೆ ಮಾಡುತ್ತಿದ್ದು. ಧರ್ಮ ಗುರುಗಳು,ಮುಖಂಡರು ಹಾಗೂ ಪಾಲಕರಿಂದ ಬದುಕಿನ ಮೌಲ್ಯದ ತಿಳಿಸಿಕೊಡುವುದಲ್ಲದೇ, ಅಪರಾಧ ಚಟುವಟಿಕೆಗಳಿಂದ ದೂರ ಇರುವಂತೆ ಮನ ಪರಿವರ್ತಿಸಲಾಗುತ್ತದೆ. ಅಲ್ಲದೇ ಮೈಸೂರು, ಬಳ್ಳಾರಿ, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಗಂಭೀರ ಪ್ರಕರಣದ ಆರೋಪಿಗಳನ್ನು ಇರಿಸಲಾಗುತ್ತದೆ. ಅವರಲ್ಲಿ ಕೆಲವರು ನಟೋರಿಯಸ್ ರೌಡಿಗಳು ಇರುತ್ತಾರೆ. ಬಂಧಿತ ಬಹುತೇಕ ಆರೋಪಿಗಳು 20 ರಿಂದ 25 ವರ್ಷದ ಒಳಗಿನವರು. ಕಾರಾಗೃಹದ ವಾತಾವರಣ ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ಜಾಮೀನು ಕೊಡಿಸುವ ಯತ್ನ ನಡೆದಿದೆ ಎನ್ನುತ್ತಾರೆ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ.
ಒಟ್ಟಿನಲ್ಲಿ ಹುಬ್ಬಳ್ಳಿಯು ಗಲಭೆಯಿಂದ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಪೊಲೀಸ್ ಕಮೀಷನರೇಟ್ ಕಾರ್ಯದಿಂದ ಆಗಬಹುದಾದ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ. ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಂಡು ಕೋಮುಗಲಭೆ ಕೈ ಹಾಕದಂತೆ ಎಚ್ಚರಿಕೆ ವಹಿಸಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/04/2022 02:37 pm