ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಮನವಮಿ ಸಂಭ್ರಮಕ್ಕೆ ʼಹನುಮʼ ಆಗಮನ !; ಈ ವ್ಯಕ್ತಿಯ ಶಕ್ತಿಗೆ ʼರಾಮ... ರಾಮʼ ಎಂದ ಜನ

ಹುಬ್ಬಳ್ಳಿ: ಶ್ರೀರಾಮ ನವಮಿಯಂದು ಎಲ್ಲೆಡೆಯೂ ಡಿಜೆ ಅಬ್ಬರ ಹಾಗೂ ಶ್ರೀ ರಾಮ ನಾಮ ಜಪ. ಆದರೆ, ಈ ಗ್ರಾಮದಲ್ಲಿ ಕೇಕೆ, ಸಿಳ್ಳೆ, ಚಪ್ಪಾಳೆ ಕಲರವ. ಜನ ಸಮೂಹದಿಂದ ಜೈ ಶ್ರೀ ರಾಮ್‌... ಜೈ ಹನುಮ, ಜೈ ಕೇಸರಿ ನಂದನ, ಬಪ್ಪರೆ ಎಂಬ ಹರ್ಷೋದ್ಗಾರ. ಇದೆಲ್ಲಕ್ಕೂ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಶಾಲೆ ಮೈದಾನದಲ್ಲಿ ನಡೆದ ಪೈಲ್ವಾನ್‌ ಶಿವಾನಂದ ಸಿದ್ದಪ್ಪ ನವಲೂರ ಅವರ ಶಕ್ತಿ ಪ್ರದರ್ಶನ!

ಹೌದು...‌ 42 ಕೆ.ಜಿ.ಯಿಂದ 78 ಕೆ.ಜಿ. ತೂಕದ ಸಂಗ್ರಾಣಿ ಕಲ್ಲುಗಳನ್ನು ಸಿಡಿ ಹೊಡೆಯುವುದು, ಭಾರೀ ತೂಕದ 4 ಸಂಗ್ರಾಣಿ ಕಲ್ಲುಗಳನ್ನು ಭುಜಕ್ಕೆ ಎತ್ತಿಕೊಳ್ಳುವುದು, 5 ಕಬ್ಬಿಣದ ಅಚ್ಚುಗಳನ್ನು ಸಿಡಿ ಹೊಡೆಯುವುದು ಹಾಗೂ 4 ಸಂಗ್ರಾಣಿ ಕಲ್ಲುಗಳನ್ನು ಒಂದೇ ಕೈಯಿಂದ ಎತ್ತಿದ ಶಿವಾನಂದರ ʼಸಾಹಸ ದರ್ಶನʼ ಪ್ರೇಕ್ಷಕರ ಮೈನವಿರೇಳಿಸಿತು.

ಶಿವಾನಂದ 3 ಹಂತದಲ್ಲಿ ಸಂಗ್ರಾಣಿ ಕಲ್ಲು ಎತ್ತಿ ಶಕ್ತಿ ಪ್ರದರ್ಶಿಸುವ ಜೊತೆಗೆ, ತಿರುಗುವ ಚಕ್ಕಡಿ ಗಾಲಿ, ಸಂಗ್ರಾಣಿ ಕಲ್ಲುಗಳ ಮೇಲೆ ನಿಂತು 11 ಸಂಗ್ರಾಣಿ ಕಲ್ಲು, ಕಬ್ಬಿಣದ ಅಚ್ಚು, ಕಲ್ಲಿನ ದುಂಡಿಗಳನ್ನು ಎತ್ತಿದರು. ನಾಜೂಕಿನ ಶಕ್ತಿ ಪ್ರದರ್ಶನವಾದ ತಿರುಗುವ ಚಕ್ಕಡಿಯಿಂದ 11 ಸಂಗ್ರಾಣಿ ಕಲ್ಲುಗಳನ್ನು ಸಿಡಿ ಹೊಡೆಯುವುದನ್ನು ಜನ ತುದಿಗಾಲಲ್ಲಿ ನಿಂತು ನೋಡಿದರು.

ಶಕ್ತಿ ಪ್ರದರ್ಶನ ವೀಕ್ಷಿಸಲು ಬ್ಯಾಹಟ್ಟಿ ಸುತ್ತಮುತ್ತಲಿನ ಹಳ್ಳಿಗಳ ಜನ ಸೇರಿದ್ದರು. ಟ್ರ್ಯಾಕ್ಟರ್‌, ಮರ, ಮನೆಗಳ ಮಹಡಿ ಮೇಲೆ ನಿಂತು ಶಕ್ತಿ ಪ್ರದರ್ಶನ ಕಣ್ತುಂಬಿಕೊಂಡರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ʼಶಿವಾನಂದರ ಶಕ್ತಿ, ಪ್ರತಿಭೆ ಮೆಚ್ಚುವಂತಹದ್ದು. ಅವರು ಇ‌ಚ್ಛಿಸಿದರೆ ತರಬೇತಿ ನೀಡಿ, ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

Edited By :
Kshetra Samachara

Kshetra Samachara

11/04/2022 02:46 pm

Cinque Terre

22.53 K

Cinque Terre

0

ಸಂಬಂಧಿತ ಸುದ್ದಿ