ಧಾರವಾಡ: ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದಂದು ನಡೆದ ಶ್ರೀ ಬಾಲಲೀಲಾ ಸಂಗಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಜನರನ್ನು ರಂಜಿಸುವುದಕ್ಕಾಗಿ ಬಂದಿದ್ದ ಬ್ರೆಕ್ ಡ್ಯಾನ್ಸ್ ಕಲಾವಿದರಿಗೆ ಕೊರೊನಾ ಕಾಟ ಎದುರಾದ ಹಿನ್ನೆಲೆಯಲ್ಲಿ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು.
ಇದೀಗ ಅವರ ಸಂಕಷ್ಟಕ್ಕೆ ಮಿಡಿದಿರುವ ಶಿರೂರು ಗ್ರಾಮಸ್ಥರು, ತಾವೇ ದೇಣಿಗೆ ಸಂಗ್ರಹಿಸಿ ಅವರಿಗೆ ನೀಡಿದ್ದಾರೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಶಿರೂರು ಗ್ರಾಮದಲ್ಲಿ ದೊಡ್ಡಮಟ್ಟದಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಜನರನ್ನು ರಂಜಿಸಲೆಂದು ಬಂದಿದ್ದ ಬ್ರೆಕ್ ಡ್ಯಾನ್ಸ್ ಕಲಾವಿದರ ತಂಡ ಟಿಕೆಟ್ ದರ ನಿಗದಿ ಮಾಡಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಯಿತು. ಪ್ರೇಕ್ಷಕರು ಬರದೇ ಈ ಕಲಾವಿದರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾದರು.
ನಂತರ ಶಿರೂರು ಗ್ರಾಮಸ್ಥರು ಹಾಗೂ ಯುವಕರು ಸೇರಿಕೊಂಡು ಊರಿನಲ್ಲಿ ಸುಮಾರು 23,150 ರೂಪಾಯಿ ದೇಣಿಗೆ ಸಂಗ್ರಹಿಸಿ ಆ ಕಲಾವಿದರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಗ್ರಾಮಸ್ಥರು ಕೊಟ್ಟ ಈ ದೇಣಿಗೆಯನ್ನು ತೆಗೆದುಕೊಂಡು ಕಲಾವಿದರು ಮರಳಿ ತಮ್ಮ ಗೂಡು ಸೇರಿದ್ದಾರೆ.
Kshetra Samachara
17/01/2022 09:35 pm