ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಆತ 23 ವರ್ಷದ ಯುವಕ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಭಾರತೀಯ ಸೇನೆಯ ಏಟ್ ಗೋರ್ಖಾ ರೆಜಮೆಂಟ್ ನ ಲೆಫ್ಟಿನಂಟ್ ಆಗಿ ಆಯ್ಕೆಯಾಗುವ ಮೂಲಕ ಎಲ್ಲರ ಗಮನಸೆಳೆಯುವುದರ ಜೊತೆಗೆ ಇತರ ಯುವಕರಿಗೆ ಮಾದರಿಯಾಗಿದ್ದಾರೆ.
ಹೀಗೆ ಯುನಿಫಾರ್ಮ ಹಾಕಿಕೊಂಡು ಹೆಮ್ಮೆಯಿಂದ ಬರುತ್ತಿರುವ ಯುವಕನ ಹೆಸರು ವಿನೋದ ಕಾಪಶಿ. ಕ್ರೀಡೆಯಲ್ಲಿ ಯುನಿವರ್ಸಿಟಿ ಬ್ಲ್ಯೂ ಆಗಿ ಹಾಗೂ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಮಾಡಿದ್ದ ವಿನೋದ್ ಅವರಿಗೆ ಧಾರವಾಡ ಜೆಎಸ್ಎಸ್ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಯಿತು.
ಪಿಯುಸಿ ಹಾಗೂ ಬಿಎ ಪದವಿಯನ್ನು ಜೆಎಸ್ಎಸ್ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ಪಡೆದ ವಿನೋದ್ 2019 ರಲ್ಲಿ ಸಿಡಿಎಸ್ಇ ಪರೀಕ್ಷೆಯನ್ನು ಬರೆದು ಪಾಸಾಗಿ ಭಾರತೀಯ ಸೇನೆಯ ಏಟ್ ಗೋರ್ಖಾ ರೆಜಮೆಂಟ್ ಗೆ ಆಯ್ಕೆಯಾದರು. ಅಲ್ಲಿ ವಿನೋದ್ ಅವರು ಪ್ಲಟೂನ್ ಲೆಫ್ಟಿನಂಟ್ ಆಗಿ ಇದೀಗೆ ನೇಮಕಗೊಂಡಿದ್ದಾರೆ.
ಈ ಸಂಬಂಧ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ವಿನೋದ್ ಕಾಪಶಿ ತಮಗೆ ಉಚಿತ ಶಿಕ್ಷಣ ನೀಡಿದ ಜನತಾ ಶಿಕ್ಷಣ ಸಮಿತಿಗೆ ಧನ್ಯವಾದ ಸಲ್ಲಿಸಿದರು.
ಇನ್ನು ತಮ್ಮ ಶಿಷ್ಯ ಉನ್ನತ ಹುದ್ದೆ ಅಲಂಕರಿಸಿದ್ದಕ್ಕೆ ಕಾಲೇಜಿನ ದೈಹಿಕ ಶಿಕ್ಷಕ ಜಿನ್ನಪ್ಪ ಸಂತಸ ವ್ಯಕ್ತಪಡಿಸಿದರು.
ಇದೀಗ ಒಂದು ವರ್ಷ ಚೆನ್ನೈನಲ್ಲಿ ತರಬೇತಿ ಪಡೆದು ಬಂದಿರುವ ವಿನೋದ್ ಅವರು ತಮ್ಮ ಹುಟ್ಟೂರಿಗೆ ಹೋಗದೇ ತಮಗೆ ಉಚಿತ ಶಿಕ್ಷಣ ನೀಡಿದ ಜೆಎಸ್ಎಸ್ ಕಾಲೇಜಿಗೆ ಯುನಿಫಾರ್ಮ್ ನಲ್ಲೇ ಆಗಮಿಸಿ ಶಿಕ್ಷಕ ವೃಂದಕ್ಕೆ ಧನ್ಯವಾದ ಸಲ್ಲಿಸಿದರು. ಒಂದು ವರ್ಷ ತರಬೇತಿ ಮುಗಿಸಿದ ಇವರು ಝಾರ್ಖಂಡ್ ಗೆ ತಮ್ಮ ಕರ್ತವ್ಯ ನಿಭಾಯಿಸಲು ಹೋಗಲಿದ್ದಾರೆ. ಇವರಿಗೆ ಒಳ್ಳೆಯದಾಗಲಿ ಭಾರತೀಯ ಸೇನೆಯಲ್ಲಿ ಇನ್ನೂ ಉತ್ತುಂಗಕ್ಕೇರಲಿ ಎಂಬುದೇ ನಮ್ಮ ಹಾರೈಕೆ.
Kshetra Samachara
26/11/2020 11:08 am