ಧಾರವಾಡ: ಸೇತುವೆ ಮೇಲೆ ಕಡಿಮೆ ನೀರು ಹರಿಯುತ್ತಿದೆ ಎಂದು ಚಾಲಕ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಬಸ್ ಸೇತುವೆ ಮಧ್ಯೆದಲ್ಲಿಯೇ ಸಿಲುಕಿಕೊಂಡು ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬಂದಿದ್ದ ಘಟನೆ ತಾಲೂಕಿನ ಹಾರೋಬೆಳವಡಿ ತುಪ್ಪರಿ ಹಳ್ಳದಲ್ಲಿ ನಡೆದಿದೆ.
ತಾಲೂಕಿನ ಹಾರೊಬೆಳವಡಿ ಹಾಗೂ ಇನಾಮಹೊಂಗಲ ಗ್ರಾಮದ ಮಧ್ಯ ಇರುವ ತುಪ್ಪರಿ ಹಳ್ಳಕ್ಕೆ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ. ಶನಿವಾರ ರಾತ್ರಿ ಜಿಲ್ಲೆಯ ಸುರಿದ ಮಳೆಯಾದ ಹಿನ್ನೆಲೆ ಹಳ್ಳಕೊಳ್ಳಗಳು ತುಂಬಿ ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿಯುತ್ತಿದೆ.ಇದೇ ವೇಳೆಗೆ ಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ, ನೀರು ಕಡಿಮೆ ಇದೆ ಎಂದು ಎಂದಿನಂತೆ ಸೇತುವೆ ಮೇಲೆಯೇ ಬಸ್ ಚಲಾಯಿಸಿದ್ದಾನೆ.
ಬಸ್ ಸೇತುವೆ ಮಧ್ಯೆ ಹೋಗುತ್ತಿದ್ದಂತೆ ಬಸ್ ನ ಒಂದು ಚಕ್ರ ಮಣ್ಣಿನಲ್ಲಿ ಕುಸಿದ ಪರಿಣಾಮ ಬಸ್ ನಡು ನೀರಿನಲ್ಲಿ ಸಿಲುಕಿಕೊಂಡಿತ್ತು.ಅದನ್ನು ಗಮನಿಸಿದ ಚಾಲಕ ತಕ್ಷಣ ಎಚ್ಚೆತು, ಬಸ್ ನಿಲ್ಲಿಸದೇ ಹರಸಾಹಸ ಪಟ್ಟು, ಬಸ್ ನ್ನು ಇನ್ನೊಂದು ಬದಿಗೆ ತರಲು ಪ್ರಯತ್ನಿಸುವ ಮೂಲಕ ದಡ ಮುಟ್ಟಿಸಿದ್ದಾನೆ. ಇದರಿಂದ ಬಸ್ ನಲ್ಲಿ ಇದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಬಸ್ ಚಾಲಕ ಬಸ್ ಪಾರು ಮಾಡಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
Kshetra Samachara
11/10/2020 04:12 pm