ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೀಕೆಂಡ್ ಕರ್ಫ್ಯೂ: ಯಾವ್ಯಾವುದಕ್ಕೆ ವಿನಾಯ್ತಿ? ಇಲ್ಲಿದೆ ನೋಡಿ ಮಾಹಿತಿ

ಧಾರವಾಡ: ರಾಜ್ಯ ಸರ್ಕಾರ ಕೊರೊನಾ ಹತೋಟಿಗೆ ತರುವ ಉದ್ದೇಶದಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದು, ಧಾರವಾಡ ಜಿಲ್ಲೆಯಲ್ಲೂ ಕಟ್ಟುನಿಟ್ಟಾಗಿ ಕರ್ಫ್ಯೂ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ಅತ್ಯಾವಶ್ಯಕ ಮತ್ತು ತುರ್ತು ಕಾರ್ಯಚಟುವಟಿಕೆಗಳನ್ನು ಹೊರತುಪಡಿಸಿ, ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಹೊರಗಡೆ ಓಡಾಡಬಾರದು. ತುರ್ತು, ಅತ್ಯಾವಶ್ಯಕ ಸೇವೆಗಳು ಮತ್ತು ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಮುಂತಾದವುಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸತಕ್ಕದ್ದು ಮತ್ತು ಅವುಗಳ ಅಧಿಕಾರಿ, ಸಿಬ್ಬಂದಿಗೆ ಅನಿರ್ಬಂಧಿತ ಓಡಾಟಕ್ಕೆ ಅವಕಾಶ ನೀಡತಕ್ಕದ್ದು. ಎಲ್ಲಾ ಸಾರ್ವಜನಿಕ ಉದ್ಯಾನವನಗಳು ಮುಚ್ಚಿರಬೇಕು.

ಮಾಹಿತಿ ತಂತ್ರಜ್ಞಾನ ಉದ್ದಿಮೆಗಳು ಒಳಗೊಂಡಂತೆ ಎಲ್ಲಾ ಉದ್ದಿಮೆಗಳ ಕಾರ್ಯಾಚರಣೆಗೆ ಕರ್ಫ್ಯೂನಿಂದ ವಿನಾಯತಿ ನೀಡಿದೆ. ನೌಕರರು ಆಯಾ ಸಂಘ, ಸಂಸ್ಥೆಗಳು ನೀಡುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸುವ ಮೂಲಕ ಸಂಚರಿಸಲು ಅನುಮತಿ ನೀಡಲಾಗಿದೆ. ತುರ್ತು ಚಿಕಿತ್ಸೆಗಾಗಿ ಸಂಚರಿಸಬೇಕಾದ ಅಗತ್ಯವಿರುವ ರೋಗಿಗಳು, ಅವರ ಪರಿಚಾರಕರು, ವ್ಯಕ್ತಿಗಳಿಗೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಉದ್ದೇಶಿಸಿರುವ ವ್ಯಕ್ತಿಗಳಿಗೆ ಕನಿಷ್ಠ ರುಜುವಾತನ್ನು ಹಾಜರುಪಡಿಸಿ ಸಂಚರಿಸಬಹುದು.

ಬೇಕರಿ, ಆಹಾರ, ದಿನಸಿ, ಹಣ್ಣು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತುಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಮತಿ ನೀಡಲಾಗಿದೆ. ಸಾರ್ವಜನಿಕ ವಿತರಣೆಯ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಬಹುದು. ಜನರು ತಮ್ಮ ಮನೆಯ ಹೊರಗೆ ಓಡಾಡುವುದನ್ನು ಕಡಿಮೆ ಮಾಡುವುದಕ್ಕಾಗಿ 24x7 ಅವಧಿಯಲ್ಲಿ ಸಾಮಗ್ರಿಗಳನ್ನು ಮನೆಮನೆಗೆ ವಿತರಿಸಲು ಪ್ರೋತ್ಸಾಹ ನೀಡಲಾಗಿದೆ.

ರೆಸ್ಟೋರೆಂಟ್ ಮತ್ತು ಹೋಟೆಲ್‍ಗಳಲ್ಲಿ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗಲು ಮಾತ್ರ ಅನುಮತಿ ನೀಡಲಾಗಿದೆ. ರೈಲುಗಳ ಸಂಚಾರಕ್ಕೆ ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ಇದೆ. ವಿಮಾನ, ರೈಲು ಮತ್ತು ರಸ್ತೆ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕಾಗಿ ವಿಮಾನ ನಿಲ್ದಾಣಗಳಿಗೆ, ರೈಲ್ವೆ ನಿಲ್ದಾಣಗಳಿಗೆ ಹೋಗಿ ಬರುವುದಕ್ಕೆ ಸಾರ್ವಜನಿಕ ಸಾರಿಗೆ ವಾಹನಗಳ ಸಂಚಾರಕ್ಕೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ (ಕಂಪನಿಗಳು ನಿರ್ವಹಿಸುವ ಕ್ಯಾಬಗಳು ಸೇರಿದಂತೆ) ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಸಿಂಧುವಾದ ಪ್ರಯಾಣ ದಾಖಲೆ ಅಥವಾ ಟಿಕೇಟನ್ನು ಪ್ರದರ್ಶಿಸಿದ ನಂತರ ಮತ್ತು ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸುವ ಷರತ್ತಿಗೊಳಪಟ್ಟು ಮಾತ್ರವೇ ಅಂಹತ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಕೋವಿಡ್-19 ಸಮುಚಿತ ವರ್ತನೆಗಳನ್ನು (CAB) ಹಾಗೂ ಅಸ್ತಿತ್ವದಲ್ಲಿರುವ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಹೊರಾಂಗಣಗಳಲ್ಲಿ 200 ಜನರು ಮೀರದಂತೆ ಹಾಗೂ ಒಳಾಂಗಣಗಳಲ್ಲಿ 100 ಜನರು ಮೀರದಂತೆ ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಮತಿಸಿದೆ.

ಈ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

06/01/2022 08:40 pm

Cinque Terre

40.08 K

Cinque Terre

33

ಸಂಬಂಧಿತ ಸುದ್ದಿ