ಧಾರವಾಡ: ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ, ನೀರಾವರಿ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಮಹಾನಗರ ಪಾಲಿಕೆಯ ಅಧೀನದಲ್ಲಿ 1261 ಕೆರೆಗಳು ಇದ್ದು, ಇವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸೂಕ್ತವಾಗಿರುವ ಕ್ರಿಯಾಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕುರಿತು ತಹಶೀಲ್ದಾರ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ 1261 ಕೆರೆಗಳ ಪೈಕಿ 1225 ಕೆರೆಗಳ ಸಮೀಕ್ಷೆಯನ್ನು ಭೂದಾಖಲೆಗಳ ಇಲಾಖೆಯಿಂದ ಮಾಡಲಾಗಿದ್ದು, ಕೆರೆಗಳ ಒಟ್ಟು ಕ್ಷೇತ್ರ, ಒತ್ತುವರಿ ಹಾಗೂ ಇತರ ಬಳಕೆ ಕುರಿತು ಮಾಹಿತಿ ಸಿದ್ಧಗೊಳಿಸಲಾಗಿದೆ. ಆಯಾ ತಹಶೀಲ್ದಾರರು ಹಾಗೂ ಜಿಲ್ಲಾ ಪಂಚಾಯತ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಜಂಟಿಯಾಗಿ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಹೇಳಿದರು.
ತಹಶೀಲ್ದಾರ ಹಾಗೂ ಜಿಲ್ಲಾ ಪಂಚಾಯತಿಯ ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳಿಗೆ ಖುದ್ದು ಭೇಟಿ ನೀಡಿ ವರದಿ ಸಲ್ಲಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತೆರವಿಗೆ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕು. ಕೆರೆಗಳ ಒತ್ತುವರಿ ತೆರವಿಗೆ ಈಗಾಗಲೇ ಉಚ್ಛ ನ್ಯಾಯಾಲಯ ನಿರ್ದೇಶನ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅನೇಕ ಕೆರೆಗಳಿಗೆ ಚರಂಡಿ ಹಾಗೂ ಇತರ ಮೂಲಗಳಿಂದ ಕಲುಷಿತ ನೀರು, ವಸ್ತಗಳು ಸೇರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು ಕಲುಷಿತ ನೀರು ಕೆರೆಗಳಿಗೆ ಸೇರದಂತೆ ಮುಂಜಾಗೃತೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಂ. ಅವರು ಮಾತನಾಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೌರಭಕುಮಾರ, ಡಿವೈಎಸ್‍ಪಿ ಮಲ್ಲಿಕಾರ್ಜುನ ಬಿ.ಸಂಕದ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ರೇಖಾ ಡೊಳ್ಳಿನ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ಎಸ್.ತಿಮ್ಮಪ್ಪ ಸೇರಿದಂತೆ ಅನೇಕರು ಸಭೆಯಲ್ಲಿದ್ದರು.
Kshetra Samachara
03/10/2022 07:23 pm