ಧಾರವಾಡ: ರಾಜ್ಯದ ಕಾನೂನು ವಿದ್ಯಾರ್ಥಿಗಳಿಗೆಂದು ಹೊರತಂದಿರುವ ಕಾನೂನು ಕನ್ನಡ ಪಠ್ಯಪುಸ್ತಕದ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ. ಧಾರವಾಡದಲ್ಲಿರುವ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಹೊರತಂದಿರುವ ಈ ಪುಸ್ತಕ ಕನ್ನಡದ ವಿಧ್ವಾಂಸರು ಹಾಗೂ ಸಾಹಿತಿಗಳನ್ನು ಅಪಮಾನ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಕಾನೂನು ಬೋಧನೆ ಮಾಡುವ ಕಾನೂನು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹೊರ ತಂದಿರುವ ಕಾನೂನು ವಿಶ್ವವಿದ್ಯಾಲಯ, ಕನ್ನಡ ಸಾಹಿತಿಗಳು ಮತ್ತು ವಿಧ್ವಾಂಸರಿಗೆ ಅಪಮಾನ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಧಾರವಾಡದಲ್ಲಿರುವ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಮತ್ತು ಪುಸ್ತಕದ ಸಂಪಾದಕರಾಗಿರುವ ಈಶ್ವರ ಭಟ ಕಾನೂನು ಕನ್ನಡ ಎಂಬ ಪಠ್ಯಪುಸ್ತಕವನ್ನು ಹೊರತಂದಿದ್ದಾರೆ. ಆಶ್ಚರ್ಯವೆಂದರೆ, ಕಾನೂನು ಕನ್ನಡ ಪುಸ್ತಕದಲ್ಲಿ ಶಿಶುನಾಳ ಶರೀಫ್, ಕುವೆಂಪು, ದ.ರಾ. ಬೇಂದ್ರೆಯವರ ಕೃತಿಯಿಂದ ಆಯ್ದ ಕೆಲವು ಉಕ್ತಿಗಳನ್ನು ಪುಸ್ತಕದಲ್ಲಿ ಸೇರಿಸಿಕೊಂಡಿದ್ದು, ಯಾವ ಸಾಹಿತಿ ಮತ್ತು ಯಾವ ಕೃತಿಯಿಂದ ಈ ಉಕ್ತಿಗಳನ್ನು ಪಡೆಯಲಾಗಿದೆ ಎಂಬ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಪೂರ್ಣ ಪುಸ್ತಕದಲ್ಲಿ ಕುಲಪತಿ ಈಶ್ವರ ಭಟ್ ಮೂರು ಲೇಖನಗಳನ್ನು ಬರೆದಿದ್ದಾರೆ. ಪಠ್ಯಪುಸ್ತಕವೊಂದನ್ನು ಪ್ರಕಟಿಸಬೇಕಾದ ಸಂದರ್ಭದಲ್ಲಿ ಸರ್ಕಾರದ ನಿಯಮಾವಳಿಯಂತೆ ಪಠ್ಯಪುಸ್ತಕ ಸಮಿತಿ ನೇಮಕ ಮಾಡಬೇಕು ಅದನ್ನು ಸಹ ಉಲ್ಲಂಘಿಸಲಾಗಿದೆ. ಅಲ್ಲದೇ ಕಾನೂನು ಕನ್ನಡ ಪುಸ್ತಕದಲ್ಲಿ ಕೆಲವು ಹಳಗನ್ನಡ ಪದ್ಯಗಳನ್ನು ಪ್ರಕಟಿಸಲಾಗಿದ್ದು, ಆ ಶಬ್ದಗಳ ಅರ್ಥವನ್ನು ಬರೆಯಲಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರ ಈ ಕೂಡಲೇ ಈ ಪುಸ್ತಕವನ್ನು ತಡೆಹಿಡಿದು, ನಡೆದ ಅಚಾತುರ್ಯ ಸರಿಪಡಿಸಿ, ಪುಸ್ತಕ ಪರಿಷ್ಕರಣೆ ಮಾಡಬೇಕೆಂದು ಕನ್ನಡಪರ ಹೋರಾಟಗಾರ ಲಕ್ಷ್ಮಣ ಬಕ್ಕಾಯಿ ಆಗ್ರಹಿಸಿದ್ದಾರೆ.
Kshetra Samachara
25/02/2021 10:26 pm