ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಜೆ ಮಕ್ಕಳಿಗೆ ಹೊರತು ಶಿಕ್ಷಕರಿಗಲ್ಲ..ಶಿಕ್ಷಕರು ಪ್ರತಿದಿನ ಶಾಲೆಗೆ ಹೋಗಲೇಬೇಕು

ಧಾರವಾಡ: ಕೋವಿಡ್ ಪಾಸಿಟಿವಿರ ದರ ಹೆಚ್ಚಾಗಿರುವ ಧಾರವಾಡ ನಗರ, ಧಾರವಾಡ ಗ್ರಾಮಾಂತರ, ಹುಬ್ಬಳ್ಳಿ ನಗರ ಹಾಗೂ ಹುಬ್ಬಳ್ಳಿ ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ನರ್ಸರಿ, ಎಲ್‌ಕೆಜಿ, ಯುಕೆಜಿ ಸೇರಿದಂತೆ 1 ರಿಂದ 8 ನೇ ತರಗತಿ ಮಕ್ಕಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ರಜೆ ಘೋಷಣೆ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಮಕ್ಕಳಿಗೆ ಮಾತ್ರ ರಜೆ ನೀಡಲಾಗಿದ್ದು, ಶಿಕ್ಷಕರು ಎಂದಿನಂತೆ ಶಾಲೆಗೆ ಬಂದು ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಇವತ್ತಿನವರೆಗೆ (ಜ.12) ಒಟ್ಟು 50 ಮಕ್ಕಳಲ್ಲಿ ಹಾಗೂ 3 ಶಿಕ್ಷಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಧಾರವಾಡ ಗ್ರಾಮೀಣ ವಲಯದಲ್ಲಿ 9 ಬಾಲಕರಿಗೆ ಹಾಗೂ 3 ಬಾಲಕಿಯರಿಗೆ ಒಟ್ಟು 12 ಜನರಿಗೆ ಮತ್ತು ಧಾರವಾಡ ನಗರ ವಲಯದಲ್ಲಿ ಓರ್ವ ಬಾಲಕಿಗೆ ಹಾಗೂ ಹುಬ್ಬಳ್ಳಿ ನಗರ ವಲಯದಲ್ಲಿ 19 ಬಾಲಕರಿಗೆ 14 ಬಾಲಕಿಯರು ಸೇರಿ 33 ಜನರಲ್ಲಿ ಕೋವಿಡ್ ಸೋಂಕು ಕಂಡು ಬಂದಿದೆ. ಧಾರವಾಡ ಗ್ರಾಮೀಣ, ಧಾರವಾಡ ನಗರ ಮತ್ತು ಹುಬ್ಬಳ್ಳಿ ನಗರ ವಲಯ ಸೇರಿ ಒಟ್ಟು 50 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಮತ್ತು ಓರ್ವ ಪುರುಷ ಹಾಗೂ ಇಬ್ಬರು ಮಹಿಳಾ ಶಿಕ್ಷಕಿಯರಲ್ಲಿಯೂ ಸಹ ಕೋವಿಡ್ ಸೋಂಕು ಪತ್ತೆಯಾಗಿದೆ. ಸೋಂಕು ಕಂಡು ಬಂದ ಶಾಲೆಗಳಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಲಾಗಿದೆ. ಸೋಂಕಿತ ಮಕ್ಕಳು ಹಾಗೂ ಶಿಕ್ಷಕರು ಆರೋಗ್ಯವಾಗಿದ್ದು, ಹೋಮ್ ಕ್ವಾಂರಟೈನ್ ಆಗಿ ಚಿಕಿತ್ಸೆ ಪಡೆದಿದ್ದಾರೆ.

ಅಳ್ನಾವರ, ಹುಬ್ಬಳ್ಳಿ ಗ್ರಾಮೀಣ, ಕುಂದಗೋಳ, ನವಲಗುಂದ ಅಣ್ಣಿಗೇರಿ ತಾಲೂಕುಗಳ ಶಾಲೆಗಳಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ಇಲ್ಲಿಯವರೆಗೆ ಕಂಡು ಬಂದಿಲ್ಲ. ಮತ್ತು ಶಾಲಾ ಮುಖ್ಯಸ್ಥರಿಗೆ ಮಕ್ಕಳ ಆರೋಗ್ಯ ಸುರಕ್ಷತೆ ಕುರಿತು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಶಾಲೆಗೆ ಬರುವ ಪ್ರತಿ ಮಗು ತಪ್ಪದೇ ಮಾಸ್ಕ್ ಧರಿಸಿ ಒಳಬರುವಂತೆ ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ. ಒಂದೇ ವರ್ಗದಲ್ಲಿ 100 ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಬ್ಯಾಚ್ ಮೂಲಕ ವರ್ಗಗಳನ್ನು ನಡೆಸುವಂತೆ ತಿಳಿಸಲಾಗಿದೆ. ಒಟ್ಟಾರೆಯಾಗಿ ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯ ಸುರಕ್ಷತೆಗೆ ಆಧ್ಯತೆ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಎಲ್ಲಾ ಶಾಲೆಯ ಪ್ರಧಾನ ಗುರುಗಳಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಸಾರ್ವಜನಿಕ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಸೂಚಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

12/01/2022 05:45 pm

Cinque Terre

37.06 K

Cinque Terre

5

ಸಂಬಂಧಿತ ಸುದ್ದಿ