ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಅಂತ ಲಕ್ಷಾಂತರ ರೂ. ಖರ್ಚು ಮಾಡಿ ಖಾಸಗೀ ಶಾಲೆಗೆ ಸೇರಿಸೋದನ್ನ ನೋಡಿದ್ದೀವಿ. ಆದ್ರೆ ಇಲ್ಲಿ ಪ್ರತಿಷ್ಟಿತ ಖಾಸಗೀ ಶಾಲೆಗಳಿಂದ ತಮ್ಮ ಮಕ್ಕಳನ್ನ ಬಿಡಿಸಿ ಸರ್ಕಾರಿ ಶಾಲೆಗೆ ಪೋಷಕರು ಸೇರಿಸ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯ ಬಿಡನಾಳದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಗೆ ಈಗ ಎಲ್ಲಿಲ್ಲದ ಬೇಡಿಕೆ. ಅದಕ್ಕೆ ಕಾರಣ ಈ ಶಾಲೆಯಲ್ಲಿರುವ ಉತ್ತಮ ಶೈಕ್ಷಣಿಕ ವ್ಯವಸ್ಥೆ..
ಬಣ್ಣದಿಂದ ಕಂಗೊಳಿಸುವ ಶಾಲಾ ಕಟ್ಟಡ, ಸುಸಜ್ಜಿತ ಕೊಠಡಿ, ಸಮೃದ್ಧ ಕ್ರೀಡಾಂಗಣ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಲ್ಯಾಬ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಈ ಸರ್ಕಾರಿ ಶಾಲೆ ಒಳಗೊಂಡಿದೆ. ಪರಿಣಾಮ ಪೋಷಕರು ಖಾಸಗೀ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಈ ಶಾಲೆಯಲ್ಲಿ ದಾಖಲಾತಿ ಮಾಡಿಸುತ್ತಿದ್ದಾರೆ.
ಸದ್ಯ ಈ ಸರ್ಕಾರಿ ಶಾಲೆಯಲ್ಲಿ ಒಟ್ಟು 1000 ಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 7 ನೇ ತರಗತಿವರೆಗೆ 847 ವಿದ್ಯಾರ್ಥಿಗಳಿದ್ದಾರೆ. ಇನ್ನು ಎಲ್ ಕೆಜಿ, ಯುಕೆಜಿಗೆ ದಾಖಲಾತಿ ಸಂಖ್ಯೆ ಹೆಚ್ಚಿಸುವಂತೆ ಪೋಷಕರು ದುಂಬಾಲು ಬಿದ್ದಿದ್ದಾರೆ. ಹಾಗಾಗಿ ಶಾಲಾ ಆಡಳಿತ ಮಂಡಳಿಯು ಸರ್ಕಾರಕ್ಕೆ ಮತ್ತೊಂದು ವಿಭಾಗ ತೆರೆಯಲು ಅವಕಾಶಕ್ಕೆ ಅನುಮತಿ ಕೋರಿದೆ.
ಈ ಶಾಲೆಗೆ ಶಿಕ್ಷಕರೇ ದೊಡ್ಡ ಶಕ್ತಿ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ತರಗತಿ ಮೂಲಕ ಪರೀಕ್ಷೆಗೆ ಸಜ್ಜುಗೊಳಿಸುತ್ತಾರೆ. ಒಟ್ಟಾರೆ, ಬಿಡನಾಳದ ಸರ್ಕಾರಿ ಪಬ್ಲಿಕ್ ಸ್ಕೂಲ್, ಖಾಸಗಿ ಶಾಲೆಯವರು ಬಾಯಿ ಮೇಲೆ ಬೆರಳಿಡುವಂತೆ ಮಾಡಿರೋದಂತೂ ಸುಳ್ಳಲ್ಲ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
26/05/2022 12:41 pm