ನವಲಗುಂದ : 60 ವರ್ಷ ವಯೋಮಾನದ ನೆಪವೊಡ್ಡಿ ಬಿಡುಗಡೆಗೊಳಿಸುತ್ತಿರುವ ರಾಜ್ಯ ಸರಕಾರದ ಕ್ರಮದಿಂದ ಅಕ್ಷರ ದಾಸೋಹ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ನವಲಗುಂದ ತಾಲೂಕ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಸುನಂದಾ ಚಿಗರಿ ಆರೋಪಿಸಿ, ಶಾಸಕರ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಿದರು.
ಸುಮಾರು ಎರಡು ಗಂಟೆಗಳ ಕಾಲ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅಕ್ಷರ ದಾಸೋಹ ನೌಕರರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಶಾಸಕರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕರಾದ ಕಿರಣ ಅರಮನೆಯವರಿಗೆ ಮನವಿ ಅರ್ಪಿಸಿದರು.
ಹೌದು ನವಲಗುಂದದ ಶಾಸಕರು, ಕೈಮಗ್ಗ ಜವಳಿ ಮತ್ತು ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸುನಂದಾ ಚಿಗರಿ, ಮಾರ್ಚ 31 ರಂದು ಅಕ್ಷರ ದಾಸೋಹ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೊಲೆಯನ್ನು ಬದಲಾಯಿಸಿ, ಎಪ್ರೀಲ್ 10ಕ್ಕೆ ಅನ್ವಯವಾಗುವಂತೆ ಕೂಡಲೇ ಮರು ಆದೇಶ ಹೊರಡಿಸಬೇಕು.
ಕೇಂದ್ರಿಕೃತ ಅಡುಗೆ ಕೇಂದ್ರ ಮಾದರಿಯ ವ್ಯವಸ್ಥೆ ಕೈ ಬಿಟ್ಟು ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಜವಾಬ್ದಾರಿಯನ್ನು ನೀಡಬಾರದು. ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸವನ್ನು ನೀಡಿ, ವೇತನ ನೀಡುವಂತೆ ಸರಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ವಿಮಲಾ ದೇಶಮುಖ, ಶಾರದ ಅಗಸಿಬಾಗಿಲ, ಯಲ್ಲಮ್ಮ ಗಸ್ತಿ, ಲಕ್ಷ್ಮಿ ಕರಿಬರ್ಮಣ್ಣವರ, ಬಸಮ್ಮ ಮಡಿವಾಳರ, ಸವಿತಾ ಅವಾರಿ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
05/05/2022 03:52 pm