ಹುಬ್ಬಳ್ಳಿ: ಭಾರತೀಯ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಹೋಳಿ ಹಬ್ಬವನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡುವ ಸದುದ್ದೇಶದಿಂದ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ 35 ಜಗ್ಗಲಗಿ ತಂಡಗಳು ಭಾಗವಹಿಸಲಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಮೂರುಸಾವಿರ ಮಠದ ಆವರಣದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇದೇ ರವಿವಾರ ಹುಬ್ಬಳ್ಳಿಯ ಜಗ್ಗಲಗಿ ಹಬ್ಬವನ್ನು ಆಚರಿಸಲಾಗುತ್ತದೆ. 8 ವರ್ಷಗಳಿಂದ ಆಚರಣೆ ಮಾಡಲಾಗುತ್ತಿದ್ದು, ಹೋಳಿ ಹಬ್ಬದ ಪ್ರಯುಕ್ತ ಚರ್ಮದ ಜಗ್ಗಲಗಿ ನುಡಿಸುವುದು ನಮ್ಮ ಭಾರತೀಯ ಸಂಪ್ರದಾಯ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.
ಅಬ್ಬರದ ಧ್ವನಿ ವರ್ಧಕಗಳಿಗೆ ಬ್ರೇಕ್ ಹಾಕಿ, ಸಾಂಪ್ರದಾಯಿಕ ವಾದ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಈ ಸಾರಿ ಮತ್ತಷ್ಟು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ಚಾಲನೆ ನೀಡಲಾಗುತ್ತದೆ ಎಂದರು.
ಜಗ್ಗಲಗಿ ಉತ್ಸವ ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ಆರಂಭಗೊಂಡು ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬ್ರಾಡ್ ವೇ, ದುರ್ಗದಬೈಲ್ ವೃತ್ತ, ರಾಧಾಕೃಷ್ಣನ್ ಗಲ್ಲಿ, ಬಾರದಾನಸಾಲ, ಸರಾಫ್ ಗಟ್ಟಿ, ಜವಳಿಸಾಲ, ಬೆಳಗಾಂವಿ ಗಲ್ಲಿ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿ ಮೂರುಸಾವಿರ ಮಠಕ್ಕೆ ಆಗಮಿಸಿ, ಉತ್ಸವ ಸಮಾಪನಗೊಳ್ಳಲಿದೆ.
Kshetra Samachara
19/03/2022 01:15 pm