ಧಾರವಾಡ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡದ ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಕನ್ನಡ ನಾಡು-ನುಡಿ ಕುರಿತು ಡಿ. 17ರಂದು ಬೆಳಿಗ್ಗೆ 10-30 ಕ್ಕೆ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಹತ್ತಿರವಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ರಾಜೇಶ್ವರಿ ಮಹೇಶ್ವರಯ್ಯ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷೆ ಡಾ. ಪ್ರಜ್ಞಾ ಮತ್ತಿಹಳ್ಳಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕರಾದ ಡಾ.ಜಿನದತ್ತ ಹಡಗಲಿ ಉಪಸ್ಥಿತರಿರುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 12-30 ಗಂಟೆಗೆ ಜರುಗುವ ಗೋಷ್ಠಿಯಲ್ಲಿ ತಾಂತ್ರಿಕತೆಯ ಇಂದಿನ ದಿನಮಾನಗಳಲ್ಲಿ ಕನ್ನಡದ ಬಿಕ್ಕಟ್ಟುಗಳು ವಿಷಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎ. ಮುರಿಗೆಪ್ಪ ಮತ್ತು ರಾಜ್ಯೋದಯದ ನಂತರದಲ್ಲಿ ಕನ್ನಡಿಗರ ಸಂಸ್ಕೃತಿ ಪಲ್ಲಟಗಳು ವಿಷಯ ಕುರಿತು ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ-ಪ್ರಾಧ್ಯಾಪಕಿ ಡಾ. ತಾರಿಣಿ ಶುಭದಾಯಿನಿ ಮಾತನಾಡಲಿದ್ದಾರೆ.
ಮಧ್ಯಾಹ್ನ 2-15ಕ್ಕೆ ಜರುಗುವ ಗೋಷ್ಠಿಯಲ್ಲಿ ಕರ್ನಾಟಕ ಏಕೀಕರಣದಲ್ಲಿ ಮಹಿಳೆಯರು ವಿಷಯ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಐ.ಕೆ.ಪತ್ತಾರ ಮತ್ತು ಆಡಳಿತಗಾರರಾಗಿ ಕನ್ನಡತಿಯರು ವಿಷಯ ಕುರಿತು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಸಂವಹನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಉಮಾ ಕೆ.ಅಕ್ಕಿ ಮಾತನಾಡಲಿದ್ದಾರೆ.
ಮಧ್ಯಾಹ್ನ 3-30 ಕ್ಕೆ ಜರುಗುವ ಮಹಿಳಾ ಕವಿಗೋಷ್ಠಿಯಲ್ಲಿ ಹನ್ನೆರಡು ಜನ ಕವಿಯತ್ರಿಯರು ಕವನ ವಾಚನ ಮಾಡಲಿದ್ದಾರೆ. ಬೆಳಗಾವಿಯ ಹಿರಿಯ ಕವಿಯತ್ರಿ ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಉತ್ತರ ಕರ್ನಾಟಕದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಜಿನದತ್ತ ಹಡಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
15/12/2021 10:12 pm