ಕಲಘಟಗಿ : ಕನ್ನಡ ರಾಜ್ಯೋತ್ಸವ ಪೂರ್ವಭಾವಿಯಾಗಿ ಕನ್ನಡ ಶಾಲೆ ಮಕ್ಕಳು ಹಾಗೂ ಶಿಕ್ಷಕ ವೃಂದದವರು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸುಂದರವಾಗಿ ವಿಭಿನ್ನವಾಗಿ ಆಚರಣೆ ಮಾಡಿದರು.
ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಗುರುವಾರದಂದು ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಮಕ್ಕಳು ತಳ್ಳುವ ನೀರಿನ ಗಾಡಿಗೆ ಬಣ್ಣ ಬಣ್ಣದ ಹಾಳೆಯ ಮೇಲೆ ಕನ್ನಡ ಅಕ್ಷರಗಳನ್ನು ಬರೆದು ತೂಗು ಹಾಕಿದ, ತಳಿರು ತೋರಣ ಹೂಮಾಲೆಗಳಿಂದ ಅಲಂಕಾರ ಮಾಡಿ ತಾಯಿ ಭುವನೇಶ್ವರಿಯ ಚಿತ್ರ ಪಟವನ್ನಿಟ್ಟು ಸುತ್ತಲೂ ಧೀಮಂತ ಕವಿಗಳ ಭಾವಚಿತ್ರಗಳನ್ನು ಕಟ್ಟಿಕೊಂಡು ಮೆರವಣಿಗೆ ಸಾಗಿದರು.
ಮಿಶ್ರಿಕೋಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡ್ರಮ್ ವಾದಕ ಬಾರಿಸುತ್ತ ತಾಯಿ ಕನ್ನಡ ಮಾತೆ ಜಯ ಘೋಷಣೆ ಹಾಕುತ್ತ ಕನ್ನಡ ಡಿಂಡಿಮವನ್ನು ಗ್ರಾಮದ ಬೀದಿಗಳಲ್ಲಿ ಮೊಳಗಿಸಿದರು.
ಈ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿಜೀಯವರ ಉಡುಗೆ ತೊಡುಗೆಗಳನ್ನು ಧರಿಸಿ ಮಕ್ಕಳು ಬೀದಿಗಳಲ್ಲಿ ಸಂಚರಿಸುವ ನೋಟ ನೋಡುಗರನ್ನು ಸೆಳೆಯಿತು.
Kshetra Samachara
28/10/2021 05:24 pm