ಧಾರವಾಡ: ಕೊರೊನಾದಿಂದಾಗಿ ಕಳೆದ ಒಂದು ವರ್ಷದಿಂದ ನಾಡಿನ ಎಲ್ಲ ಜಾತ್ರಾ ಮಹೋತ್ಸವಗಳು ತಮ್ಮ ಕಳೆ ಕಳೆದುಕೊಂಡಿದ್ದವು. ಇದೀಗ ಕೊರೊನಾ ಹಾವಳಿ ಕಡಿಮೆಯಾಗಿರುವುದರಿಂದ ಸರ್ಕಾರವು ಕೂಡ ಜಾತ್ರೆಗಳನ್ನು ನಡೆಸಲು ಪರವಾನಿಗಿ ನೀಡಿದೆ.
ಸರ್ಕಾರ ಪರವಾನಿಗಿ ನೀಡಿದ ನಂತರ ಧಾರವಾಡದ ಪ್ರಸಿದ್ಧ ಮುರುಘಾಮಠದ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.
ಕಳೆದ ಎಂಟು ಹತ್ತು ದಿನಗಳಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಮುರಘಾಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಇಂದು ಬೆಳಿಗ್ಗೆ ಮಠದಲ್ಲಿ ಲಿಂಗಧೀಕ್ಷೆ ಕಾರ್ಯಕ್ರಮ ನೆರವೇರಿತು. ಸಂಜೆ 4 ಕ್ಕೆ ಡಾ.ಶಿವಮೂರ್ತಿ ಮುರುಘಾ ಶರಣರು ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವಕ್ಕೆ ಚಾಲನೆ ನೀಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ ಮುಂದಾಳತ್ವದಲ್ಲಿ ನಡೆದ ಈ ಎಲ್ಲ ಕಾರ್ಯಕ್ರಮಗಳಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
ಶ್ರೀ ಮಠದಿಂದ ಎಳೆಯಲ್ಪಟ್ಟ ರಥಕ್ಕೆ ಭಕ್ತರು ಉತ್ತುತ್ತಿ, ಬಾಳೆಹಣ್ಣು, ನಿಂಬೆಹಣ್ಣು ತೂರಿ ಭಕ್ತಿಯ ನಮನ ಸಲ್ಲಿಸಿದರು. ರಥವು ಡಿಪೊ ಸರ್ಕಲ್ ವರೆಗೆ ಬಂದು ಮರಳಿ ಮುರುಘಾಮಠಕ್ಕೆ ಬಂದು ತಲುಪಿತು. ಈ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾದರು.
Kshetra Samachara
16/02/2021 09:59 pm