ನೋಡಬನ್ನಿ.....ಕನ್ನಡಕ್ಕಿಲ್ಲಿ....
ನಿತ್ಯ ಪೂಜೆ....! ಉತ್ಸವ...!!
ಮಹಾ ಮಂಗಳಾರತಿ..!!!
ಇಲ್ಲಿ ಕನ್ನಡದ ನಿತ್ಯೋತ್ಸವ..ನಿತ್ಯ ಕನ್ನಡದ ಜಪ-ತಪ ಮಂತ್ರ ಘೋಷಣೆಗಳು....... ಕನ್ನಡದ್ದೇ ಮಹಾ ಮಂಗಳಾರತಿ!! ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!!
ಈಗ ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ. ಹುಬ್ಬಳ್ಳಿಯ ಕನ್ನಡಿಗರೊಬ್ಬರ ಅಪ್ಪಟ ಕನ್ನಡ ಪ್ರೇಮದ ಬಗ್ಗೆ ಬೆಳಕು ಚೆಲ್ಲುವ ಚಿಕ್ಕ ಪ್ರಯತ್ನವಿದು.
ಕನ್ನಡಕ್ಕೆ ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಏಳು ಪ್ರಕಾಂಡ ಪಂಡಿತರ ಭಾವ ಚಿತ್ರಗಳನ್ನು ಮೊದಲು ಪೂಜಿಸಿ ನೂತನ ಗೃಹದ ಹೊಸ್ತಿಲು ದಾಟಿ ಒಳ ಪ್ರವೇಶಿಸಿದ ೬೭ ರ ಹರೆಯದ ಕಲಾ ಪದವೀಧರ ವೆಂಕಟೇಶ ಕೃಷ್ಣಾಜಿ ಮರೇಗುದ್ದಿಯವರೇ ಕನ್ನಡದ ಕಟ್ಟಾ ಪೂಜಾರಿ!
ಅವರ ಮನೆ "ಸರ್ವಜ್ಞ" ನ ಒಳಹೊಕ್ಕರೆ 'ಬಸವಣ್ಣ'ನ ಬೃಹತ್ ನಾಮಫಲಕ ಸ್ವಾಗತಿಸುತ್ತದೆ. ಮುಂದೆ 'ಅಲ್ಲಮಪ್ರಭು' ಸಭಾಂಗಣ, 'ಪಂಪ', 'ರನ್ನ', 'ಕುಮಾರವ್ಯಾಸ', 'ಲಕ್ಷ್ಮೀಶ' ಮುಂತಾದ ಕೊಠಡಿಗಳು ಕೈಬೀಸಿ ಕರೆಯುತಿವೆ.
'ಅಕ್ಕಮಹದೇವಿ' ಅಡುಗೆಮನೆ ತಮ್ಮ ಹಸಿವ ಹಿಂಗಿಸಲು ಸಿದ್ಧವಾಗಿದೆ. ಒಪ್ಪ-ಓರಣವಾಗಿ ಜೋಡಿಸಿಟ್ಟ ಅಸಂಖ್ಯ ಕನ್ನಡ ಪುಸ್ತಕಗಳು, ಕನ್ನಡ ಭಕ್ತಿ-ಭಾವ ಚಿತ್ರಗೀತೆಗಳ ಧ್ವನಿಮುದ್ರಿಕೆಗಳ ಗುಚ್ಛಗಳು, ಅವರ ವಯಕ್ತಿಕ ದೂರವಾಣಿ ಕೈಪಿಡಿಯಲ್ಲಿರುವವರ ಹೆಸರು ಹಾಗೂ ಸಂಖ್ಯೆಗಳು ಕಸ್ತೂರಿ ಕನ್ನಡದಲ್ಲಿ ರಾರಾಜಿಸುತ್ತವೆ.ಇನ್ನು ಅವರೊಡನೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿ ಗೆಲ್ಲುವವರುಂಟೇ!?! ಶುಭೋದಯ....ದಿಂದ ಆರಂಭವಾಗಿ ಶುಭರಾತ್ರಿಯವರೆಗಿನ..........ಸುದೀರ್ಘ ಮಾತಿನ ಭರಾಟೆಯಲ್ಲಿ ಅಪ್ಪಿ-ತಪ್ಪಿಯೂ ಒಂದೂ ಆಂಗ್ಲ ಪದ ನುಸುಳುವುದಿಲ್ಲ. ಅವರ ಮನೆಯೇ ಕನ್ನಡಮಯ! "ಇಲ್ಲಿರುವುದು ಕನ್ಧಡದ ಅನ್ನ...ಕಲಿಯಿರಿ ತಿನ್ನುವ ಮುನ್ನ" ಎಂಬುದು ಇವರ ವೇದವಾಕ್ಯ!!
ಸದಾ ಕನ್ನಡದ ಬಗೆಗಿನ ಮರೇಗುದ್ದಿಯವರ ಕಾಳಜಿ-ಕಳಕಳಿ ಅಕ್ಕರೆಗೆ ೧೯೭೧ ರಲ್ಲಿ ಅವರೇ ಸ್ಥಾಪಿಸಿ ಮುನ್ನಡೆಸುತ್ತಿರುವ"ವೀರ ಪುಲಕೇಶಿ ಕನ್ನಡ ಬಳಗ" ವೇ ನಿದರ್ಶನ.ತನ್ಮೂಲಕ ಕಳೆದ ೩೫ ವರುಷಗಳಿಂದ 'ಮನೆ ಮನೆಯಲ್ಲಿ ಕನ್ನಡ' ಕಾರ್ಯಕ್ರಮ ಏರ್ಪಡಿಸುತ್ತ ಕನ್ನಡದ ದೀವಿಗೆಯನ್ನು ಎಲ್ಲೆಡೆ ಬೆಳಗುತ್ತಿದ್ದಾರೆ. ಕನ್ನಡ ಪರ ಹೋರಾಟಗಳಲ್ಲಂತೂ ಮರೇಗುದ್ದಿಯವರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.
ವೃತ್ತಿಯಿಂದ ಅಕ್ಕಸಾಲಿಗನಾದರೂ ಅವರ ಪ್ರವೃತ್ತಿಯ ಪ್ರಪಂಚಕ್ಕೆ ಪರಿಮಿತಿಯೆಂಬುದಿಲ್ಲ.ತಮ್ಮ ಆದಾಯದ ಪ್ರತಿಶತ ೧೦ ರಷ್ಟು ಕನ್ನಡ ಕೆಲಸಕ್ಕಾಗಿ ಮೀಸಲಿಟ್ಟಿರುವುದು ಅವರ ಹೆಗ್ಗಳಿಕೆಯೇ. ಕವನ ಲೇಖನಗಳ ಮೂಲಕ ಝಾಗೃತಿ ಮೂಡಿಸುವುದು, ಅನಕೃ ದಿನ, ಶಿಕ್ಷಕರ ದಿನಾಚರಣೆ, ಕವಿಗೋಷ್ಠಿ ಆಯೋಜಿಸುವುದು ಮರೇಗುದ್ದಿಯವರ ಇತರೇ ಹವ್ಯಾಸಗಳು. ಕನ್ನಡ ಪುಸ್ತಕಗಳು, ಕನ್ನಡ ದಿಗ್ಗಜರ ಕವನ ಪದ ವಚನ ಉಕ್ತಿಗಳನ್ನೊಳಗೊಂಡ ಕನ್ನಡ ತಾಂಬೂಲ, ಅವರೇ ತಯಾರಿಸಿದ ಕನ್ನಡ ಅಂಕೆಗಳಿರುವ ಗೋಡೆ ಗಡಿಯಾರ ಮುಂತಾದುವುಗಳನ್ನು ಸಾಂದರ್ಭಿಕ ಕಾಣಿಕೆಯಾಗಿ ನೀಡಲು ಅವರಿಗೆ ಬಲು ಅಚ್ಚುಮೆಚ್ಚು.
೨೦೧೭ ರ ಕನ್ನಡ ರಾಜ್ಯೋತ್ಸವಕ್ಕೆ ಮರೇಗುದ್ದಿಯವರನ್ನು ಮುಖ್ಯ ಅತಿಥಿಯಾಗಿ ಕರೆದ ಹುಬ್ಬಳ್ಳಿಯ ಪ್ರತಿಷ್ಠಿತ ವಿದ್ಯಾಲಯವೊಂದು ಆಮಂತ್ರಣ ಪತ್ರಿಕೆಯನ್ನು ಆಂಗ್ಲ ಭಾಷೆಯಲ್ಲಿ ಮುದ್ರಿಸಿದ್ದಕ್ಕಾಗಿ ಕೊನೇ ಘಳಿಗೆಯಲ್ಲಿ ನಿರಾಕರಿಸಿದ್ದು, ನಮ್ಮ ಮೊಮ್ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುತ್ತೇವೆಂದಾಗ ನಿಶ್ಚಯದ ಹಂತಕ್ಕೆ ಬಂದಿದ್ದ ಮಗನ ಮದುವೆ ಮುರಿದು ಬಿತ್ತಯ, ಮರುಪ್ರಶ್ನೆ ಮಾಡದೇ, ಮತ್ತೊಂದು ಸಂಬಂಧ ಕುದುರಿಸಿದ ಮರೇಗುದ್ದಿಯವರ ಕನ್ನಡದ ಬದ್ಧತೆ ಮಾತ್ರ ಅಭಿನಂದನೀಯ!!
● ಪತ್ನಿ ಶ್ರೀಮತಿ ಗೀತಾ, ಪುತ್ರ ಮಯೂರ, ಪುತ್ರಿ ವಾಣೀ, ಸೊಸೆ, ಅಳಿಯ ಇವರ ಕನ್ನಡ ಕೈಂಕರ್ಯದಲ್ಲಿ ಸಹಕರಿಸುತ್ತಿದ್ದಾರೆ. ಪ್ರಸಿದ್ಧಿ-ಪ್ರಚಾರ ಬಯಸದ ವೆಂಕಟೇಶ ಮರೇಗುದ್ದಿಯವರನ್ನು ಮಹಾ ನಗರ ಪಾಲಿಕೆಯ 'ಧೀಮಂತ ನಾಗರೀಕ ರಾಜ್ಯೋತ್ಸವ'ಪ್ರಶಸ್ತಿ, ಬೆಂಗಳೂರು ಕನ್ನಡ ಸಂಘಟನೆಯ 'ಕರ್ನಾಟಕ ಭೂಷಣ' ಮತ್ತಿತರನೇಕ ಆದರ ಸನ್ಮಾನಗಳಿಗೆ ಅರಸಿ ಬಂದಿವೆ. ಇವರ ಕನ್ನಡ ಸೇವೆ ನಿರಂತರವಾಗೆ ನಿರಾತಂಕವಾಗಿ ಮುಂದುವರೆಯೆಲೆಂಬುದು ಮನದಾಳದಾಶಯ.
ಸಂಪರ್ಕ ವಿಳಾಸ:
ವೆಂಕಟೇಶ ಕೃ ಮರೇಗುದ್ದಿ, "ಸರ್ವಜ್ಞ" ಮನೆ ಸಂ.೬೮, ಲಕ್ಷೀಶ ಕವಿ ಮಾರ್ಗ, ವೆಂಕಟೇಶ ನಗರ,
ಗೋಕುಲ ರಸ್ತೆ, ಹುಬ್ಬಳ್ಳಿ.
ಜಂಗಮವಾಣಿ:೯೯೪೫೧೧೪೩೩೫.
ಲೇಖನ : ನಾರಾಯಣ ವೆಂ ಭಾದ್ರಿ., ೯೨೪೩೨ ೪೮೯೭೨
Kshetra Samachara
01/11/2020 07:01 am