ಧಾರವಾಡ : ಅದು ಐದು ಎಕರೆ ಜಮೀನಿಗಾಗಿ ನಡೆದಿದ್ದ ಕಲಹ. ಆ ಜಮೀನಿಗಾಗಿ ಅಣ್ಣ, ತಮ್ಮಂದಿರ ಮಧ್ಯೆ ಕೆಲ ದಿನಗಳ ಹಿಂದೆ ವಾಗ್ವಾದ ಕೂಡ ನಡೆದಿತ್ತು. ಆದರೆ, ಈ ವಾಗ್ವಾದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡುವ ಹಂತಕ್ಕೆ ಹೋಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕೊನೆಗೆ ಆ ವ್ಯಕ್ತಿಯನ್ನು ನಿರ್ಜನ ಪ್ರದೇಶದ ಹೊಲದ ರಸ್ತೆಯಲ್ಲಿ ಹಾಡಹಗಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.
ಹೌದು! ನಾವು ಈಗ ಹೇಳುತ್ತಿರೋದು ಮೇ.10 ರಂದು ಕವಲಗೇರಿ ಬಳಿ ನಡೆದ ಹತ್ಯೆಯ ಸ್ಟೋರಿ. ಕೊಲೆ ನಡೆದು ಕೇವಲ ನಾಲ್ಕು ದಿನದ ಒಳಗಾಗಿ ಖಾಕಿ ಪಡೆ ಮೂವರು ಹಂತಕರನ್ನು ಹೆಡೆಮುರಿ ಕಟ್ಟಿಯೇ ಬಿಟ್ಟಿದೆ.
ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪ್ರಕಾಶ ದೇಶದ (37) ಎಂಬ ವ್ಯಕ್ತಿಯನ್ನು ಆತನ ಸಂಬಂಧಿಕರೇ ಬರ್ಬರವಾಗಿ ಹತ್ಯೆ ಮಾಡಿದ್ದರು. ಸುರೇಶ ದೇಶದ, ಕಲ್ಲಪ್ಪ ದೇಶದ ಹಾಗೂ ವಾಸಪ್ಪ ದೇಶದ ಎಂಬುವವರೇ ಪ್ರಕಾಶನನ್ನು ಹತ್ಯೆ ಮಾಡಿದ ಕೊಲೆ ಪಾತಕರು. 20 ಎಕರೆ ಜಮೀನನ್ನು ಈ ಕುಟುಂಬ ಹೊಂದಿದ್ದು, ಅದರಲ್ಲಿ ಐದು ಎಕರೆ ಜಮೀನಿಗೆ ಸಂಬಂಧಿಸಿದಂತೆ ಪ್ರಕಾಶ ದೇಶದ ಹಾಗೂ ಹಂತಕರ ಮಧ್ಯೆ ಕಿರಿಕ್ ಸಹ ನಡೆದಿತ್ತು. ಇದೇ ವಿಚಾರವಾಗಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಪ್ರಕಾಶನನ್ನು ಮುಗಿಸಿದರೆ ತಮ್ಮ ದಾರಿ ಸರಳವಾಗಬಹುದು ಎಂದು ನಿರ್ಜನ ಪ್ರದೇಶದ ಹೊಲದ ರಸ್ತೆಯಲ್ಲಿ ಆರೋಪಿಗಳು ಪ್ರಕಾಶನನ್ನು ಹತ್ಯೆ ಮಾಡಿಯೇ ಬಿಟ್ಟಿದ್ದರು. ಕೊಲೆಗೆ ತಲ್ವಾರ್ ಹಾಗೂ ಚೂರಿಯನ್ನು ಬಳಸಲಾಗಿತ್ತು. ಅಲ್ಲದೇ ಪ್ರಕಾಶನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಹತ್ಯೆಯಾದ ನಾಲ್ಕೇ ದಿನದಲ್ಲಿ ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
5 ಎಕರೆ ಸಲುವಾಗಿ ಈ ಕುಟುಂಬಗಳ ಮಧ್ಯೆ ವ್ಯಾಜ್ಯ ಇತ್ತು. ಅದನ್ನು ಯಾರು ಉಳುಮೆ ಮಾಡಬೇಕು ಎಂಬುದರ ಬಗ್ಗೆ ಆಗಾಗ ಜಗಳ ಕೂಡ ನಡೆಯುತ್ತಿತ್ತು. ಹೀಗಾಗಿ ಆರೋಪಿಗಳು ಪ್ರಕಾಶನನ್ನು ಹತ್ಯೆ ಮಾಡಿದ್ದರು. ಈಗಾಗಲೇ ಮೂರು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಈ ಕೊಲೆ ಸಂಬಂಧ ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Kshetra Samachara
14/05/2022 04:15 pm