ಹುಬ್ಬಳ್ಳಿ: ರಾಜಸ್ಥಾನ ಉದಯಪುರದ ಹತ್ಯೆ ಪ್ರಕರಣ ನಿಜಕ್ಕೂ ಹೀನ ಕೃತ್ಯ, ಅಮಾನವೀಯ. ಹಾಡಹಗಲೇ ಕಗ್ಗೊಲೆಗೈದಿರುವುದು ಖಂಡನೀಯ. ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಎಂಎಲ್ ಸಿ ತೇಜಸ್ವಿನಿ ಗೌಡ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ "ಅಗ್ನಿಪಥ್" ಗೆ ವಿರೋಧ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಸರ್ಕಾರ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಬಹುದೊಡ್ಡ ಕ್ರಾಂತಿ ರೂಪಿಸಿದೆ. ಆದರೆ, ಅಗ್ನಿಪಥ್ ಯೋಜನೆಯನ್ನು ಕೆಟ್ಟ ರೀತಿ ಪ್ರತಿಬಿಂಬಿಸಲಾಗುತ್ತಿದೆ. ಕೇವಲ 2 ದಿನದಲ್ಲಿ ವಾಯುಸೇನೆಗೆ 2 ಲಕ್ಷ ಯುವಕರು ಇಚ್ಛಾಶಕ್ತಿ ತೋರಿದ್ದಾರೆ.
ದೇಶ ವಿರೋಧಿ ಕೃತ್ಯ ಕಾಂಗ್ರೆಸ್ ಬಿಡಬೇಕು. ಬಿಜೆಪಿ ಸರ್ಕಾರ ಮಹತ್ತರ ಯೋಜನೆಗಳ ಜತೆಗೆ ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳನ್ನೂ ಜಾರಿಗೆ ತಂದಿದೆ. ದೇಶಾದ್ಯಂತ ನರೇಂದ್ರ ಮೋದಿಯವರು ಬಹುದೊಡ್ಡ ಬದಲಾವಣೆ ತಂದಿದ್ದಾರೆ ಎಂದರು.
ನಮ್ಮ ದೇಶದಲ್ಲಿ ನಿರುದ್ಯೋಗ ಇರುವುದು ಸತ್ಯ. ವಡಾ ಪಾವ್ ಮಿರ್ಚಿ ಮಾರುವುದು ತಪ್ಪೇನಲ್ಲ. ಯುವಕರು ಯಾವುದಾದರೂ ಕೆಲಸ ಮಾಡಲಿ, ಕಾಯಕವೇ ಕೈಲಾಸ. ಪ್ರತ್ಯೇಕ ರಾಜ್ಯ ಕೂಗು ವಿಚಾರವಾಗಿ ಪ್ರತಿಕ್ರಿಯಿಸಿದ ತೇಜಸ್ವಿನಿ, ಪ್ರತ್ಯೇಕ ರಾಜ್ಯದ ಕೂಗಿಗೆ ನಮ್ಮ ಬೆಂಬಲವಿಲ್ಲ. ನಾವು ರಾಜ್ಯ ಒಡೆಯುವವರಲ್ಲ, ಒಂದು ಮಾಡುವವರು ಎಂದರು.
ಪಠ್ಯ ಪರಿಷ್ಕರಣೆ ವಿಚಾರದಲ್ಲಿನ ಗೊಂದಲ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎಂದೂ ಇದನ್ನು ಸಮರ್ಥಿಸಿಲ್ಲ. ಲೋಪದೋಷ ಕಂಡುಬಂದ ಬಗ್ಗೆ ಸರಿ ಪಡಿಸುವ ಕೆಲಸ ನಡೆದಿದೆ. ಪಠ್ಯ ಪುಸ್ತಕ ವಿವಾದಕ್ಕೆ ಸದ್ಯ ತೆರೆ ಬಿದ್ದಿದೆ ಎಂದರು.
Kshetra Samachara
29/06/2022 02:55 pm