ಹುಬ್ಬಳ್ಳಿ: ಆತ ಮುಖಕ್ಕೆ ಬಣ್ಣ ಬಳಿದುಕೊಂಡು, ರಾಮ ಲಕ್ಷ್ಮಣರ ವೇಷ ಧರಿಸಿಕೊಂಡು ಹೊಟ್ಟೆ ತುಂಬಿಕೊಳ್ಳುವ ಯುವಕ. ಜೀವನಕ್ಕಾಗಿ ಭಿಕ್ಷಾಟನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವಕ ಈಗ ಸ್ಟಾರ್ ಆಗಿ ಮಿಂಚುತ್ತಿದ್ದಾನೆ. ಹಾಗಿದ್ದರೇ ಯಾರು ಯುವಕ...? ಆತನ ಜೀವನದ ಕಥೆ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಹೀಗೆ ರಾಮ, ಲಕ್ಷ್ಮಣರ ವೇಷ ಹಾಕಿಕೊಂಡು ಕುಣಿದು ಭಿಕ್ಷೆ ಬೇಡುತ್ತಿರುವ ಯುವಕ. ಬೈಕ್ ಮೇಲೆ ಗೃಹಬಳಕೆಯ ಸಾಮಾನುಗಳನ್ನು ಹೊತ್ತು ಮಾರಾಟ ಮಾಡುತ್ತಿರುವ ಈ ಶ್ರಮಜೀವಿಯ ಹೆಸರು ಮಾರೇಶ್ ದೂಪಮ್. ಮೂಲತಃ ಕೊಪ್ಪಳ ಜಿಲ್ಲೆಯ ಕೂಕನೂರ ತಾಲ್ಲೂಕಿನ ಕುದುರೆಮತ್ತಿ ಗ್ರಾಮದವನು. ಅಲೆಮಾರಿ ಜನಾಂಗದಲ್ಲಿ ಜನಿಸಿದ ಈತ, ಇದೀಗ ಮಾರಿಗಡ ಚಿತ್ರದ ನಾಯಕ ನಟನಾಗಿ ಅಭಿನಯಿಸುವ ಮೂಲಕ ಸಿನಿಮಾ ಜೀವನಕ್ಕೆ ಕಾಲಿಟ್ಟಿದ್ದಾನೆ. ಅಲೆಮಾರಿ ಜನಾಂಗದಲ್ಲಿ ಹುಟ್ಟಿರುವ ಈ ಕಲಾವಿದ ಸಿನಿಮಾದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದಾನೆ. ಪ್ರತಿಬಿಂಬ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗ್ತಿದೆ.
ಇನ್ನೂ ತಂದೆ ರಾಮಣ್ಣ ದೂಪಮ್ ವೇಷಾಧಾರಿಯಾಗಿದ್ದು, ತಾಯಿ ಭೀಮವ್ವ ದೂಪಮ್ ಜೋಗತಿಯಾಗಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಮಾರೇಶ್ ಸಿನಿಮಾ ರಂಗದ ಆಸೆಯನ್ನು ಹೊತ್ತು ಅದೆಷ್ಟೋ ಅವಮಾನದ ಮೂಲಕ ಈಗ ಸಾಧಿಸುವ ಛಲದೊಂದಿಗೆ ಸಿನಿಮಾಗೆ ನಾಯಕನಟನಾಗಿ ಅಭಿನಯಿಸುತ್ತಿದ್ದಾನೆ.
ಒಟ್ಟಿನಲ್ಲಿ ತನ್ನಲ್ಲಿರುವ ಅಗಾಧವಾದ ಕಲೆಯನ್ನು ಹೊತ್ತು ಅದೆಷ್ಟೋ ಊರು ಊರು ಸುತ್ತಿದ್ದರೂ ಕಲೆಗೆ ನೆಲೆ ಕಾಣದಿದ್ದಾಗ ಸಿಕ್ಕಿದ್ದು ಹುಬ್ಬಳ್ಳಿ-ಧಾರವಾಡದ ಪ್ರತಿಬಿಂಬ ಕ್ರಿಯೇಷನ್ಸ್. ಈ ಮೂಲಕ ತನ್ನಲ್ಲಿರುವ ಕಲೆಯನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯಕ್ಕೆ ಈ ಕಲಾವಿದ ಮುಂದಾಗಿದ್ದು, ಈ ಕಲಾವಿದನ ಭವಿಷ್ಯ ಉಜ್ವಲವಾಗಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/06/2022 06:50 pm