ಹುಬ್ಬಳ್ಳಿ: ರಕ್ಷಾ ಬಂಧನದ ಮುನ್ನಾದಿನವಾದ ಇಂದು ಮಾರುಕಟ್ಟೆಯಲ್ಲಿ ರಾಖಿಗಳ ಖರೀದಿ ಭರಾಟೆ ಜೋರಾಗಿದೆ. ಮಂಗಳವಾರದಿಂದಲೇ ಹುಬ್ಬಳ್ಳಿಯ ಜನತಾ ಬಜಾರ, ಗಾಂಧಿ ಮಾರುಕಟ್ಟೆ, ಹಳೇಹುಬ್ಬಳ್ಳಿ ಸೇರಿದಂತೆ ಇನ್ನಿತರ ಪ್ರಮುಖ ರಸ್ತೆಗಳ ಅಂಗಡಿಗಳಲ್ಲಿ ರಾಖಿ ಮಾರಾಟ ನಡೆಯುತ್ತಿದೆ.
ರಕ್ಷಾ ಬಂಧನ ಅಕ್ಕ-ತಂಗಿ, ಅಣ್ಣ- ತಮ್ಮಂದಿರ ಪವಿತ್ರ ಹಬ್ಬವಾಗಿದೆ. ಹಬ್ಬದ ದಿನ ಅಣ್ಣ- ತಮ್ಮ ಎಲ್ಲೇ ಇದ್ದರೂ ಅಕ್ಕ- ತಂಗಿಯರ ಬಳಿಗೆ ಹೋಗಿ ರಾಖಿ ಕಟ್ಟಿಕೊಳ್ಳುವ ಮತ್ತು ಅಕ್ಕ-ತಂಗಿಯರು ಅಣ್ಣ-ತಮ್ಮಂದಿರ ಬಳಿಗೆ ತೆರಳಿ ರಾಖಿ ಕಟ್ಟುವುದು ಸಂಪ್ರದಾಯ. ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಸಹೋದರರಿಗೆ ಹಾಗೂ ಸಂಬಂಧಿಗಳಿಗೆ ಗ್ರಾಮೀಣ ಭಾಗದ ಸಹೋದರಿಯರು ಅಂಚೆ ಮೂಲಕ ರಾಖಿ ಕಳಿಸಿರುವುದು ವಾಡಿಕೆ.
ಇನ್ನು ರಾಖಿ ತಯಾರಿಕರು ಕಾಲಮಾನಕ್ಕೆ ತಕ್ಕಂತೆ ರಾಖಿ ಸಿದ್ಧಪಡಿಸಿದ್ದಾರೆ. ರಾಖಿಗಳಲ್ಲಿ ಬಸವಣ್ಣ, ಶಿವಕುಮಾರ ಸ್ವಾಮೀಜಿ, ಬಸವಲಿಂಗ ಅವಧೂತರು ಸೇರಿದಂತೆ ಇನ್ನಿತರ ಮಹನೀಯರ ಭಾವಚಿತ್ರ ಸೇರಿಸಿ ಸಿದ್ಧಪಡಿಸಿರುವುದರಿಂದ ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಜನ ತಮ್ಮ ಇಷ್ಟಕ್ಕೆ ಅನುಗುಣವಾಗಿ ರಾಖಿ ಖರೀದಿಸಲು ಮುಗಿ ಬೀಳುತ್ತಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ನೂಲಿನಿಂದ ಹಿಡಿದು ಹಲವಾರು ಬಗೆಯ ರಾಖಿಗಳಿವೆ. 20 ರಿಂದ 200 ರೂ ರವರೆಗೆ ಬಗೆ ಬಗೆಯ ರಾಖಿಗಳೂ ಮಾರಾಟ ಆಗುತ್ತಿವೆ. ನೂಲು, ರುದ್ರಾಕ್ಷಿ, ಮುತ್ತು, ಹೂವು ಮತ್ತಿತರ ಆಕಾರದ ರಾಖಿಗಳು ಗಮನ ಸೆಳೆಯುತ್ತಿವೆ.
ಮಕ್ಕಳು ಹಾಗೂ ಹಿರಿಯರಿಗಾಗಿ ವಿಭಿನ್ನ ರೀತಿಯ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
Kshetra Samachara
11/08/2022 03:39 pm