ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಫಲಿತಾಂಶ ಪ್ರಕಟಗೊಂಡಿದ್ದು, ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅತ್ಯಧಿಕ ಪ್ರಥಮ ಪ್ರಾಶಸ್ತ್ಯದ ಮತ ಪಡೆಯುವ ಮೂಲಕ ಸತತ 8ನೇ ಬಾರಿಗೆ ಗೆಲುವಿನ ನಗೆ ಬೀರಿ, ದಾಖಲೆ ಬರೆದಿದ್ದಾರೆ.
ಹೌದು..ಬಸವರಾಜ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾದ ಬಳಿಕ ತೀವ್ರ ಜಿದ್ದಾ ಜಿದ್ದಿಯಿಂದ ಕೂಡಿದ್ದ ಪಶ್ಚಿಮ ಶಿಕ್ಷಕರ ಪಧವೀಧರರ ಕ್ಷೇತ್ರದ ರಣಕಣದ ಫಲಿತಾಂಶ ಕೊನೆಗೂ ಹೊರ ಬಿದ್ದಿದೆ. ಬೆಳಗಾವಿಯ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 8:30ಕ್ಕೆ ಆರಂಭವಾದ ಮತ ಎಣಿಕೆ , ಅಭ್ಯರ್ಥಿಗಳಲ್ಲಿ ಸಾಕಷ್ಟು ಟೆನ್ಸನ್ ಮೂಡಿಸಿತ್ತು. ಕೊನೆಗೂ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ 9266 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ 4597 ಮತ ಪಡೆದರೆ, ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ 273, ಪಕ್ಷೇತರರಾದ ಎಂ.ಪಿ. ಕರಬಸಪ್ಪ 60, ಕೃಷ್ಣವಾಣಿ 58, ಪ್ರೊ. ಎಫ್.ವಿ. ಕಲ್ಲನಗೌಡರ 27, ವೆಂಕನಗೌಡ ಗೋವಿಂದಗೌಡರ 79 ಮತ ಪಡೆದಿದ್ದಾರೆ. ಇನ್ನು ಅತ್ತ ಬಸವರಾಜ ಹೊರಟ್ಟಿ ಗೆಲುವು ಸಾಧಿಸುತ್ತಿದ್ದಂತೆ ಹುಬ್ಬಳ್ಳಿಯ ಬಿಜೆಪಿ ಕಚೇರಿ ಎದುರು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದರು.
ಇನ್ನೂ ಈ ಬಾರಿಯ ಚುನಾವಣೆ ಗೆಲ್ಲುವ ಮೂಲಕ ಬಸವರಾಜ ಹೊರಟ್ಟಿ ಮತ್ತೊಂದು ದಾಖಲೆ ಮಾಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ 8 ಬಾರಿಗೆ ಈವರೆಗೂ ಯಾರೊಬ್ಬರೂ ಗೆಲುವು ಕಂಡಿಲ್ಲ. ಈ ಮೂಲಕ ಬಸವರಾಜ ಹೊರಟ್ಟಿ ಪರಿಷತ್ ಪ್ರವೇಶಿಸಿ ವಿಶ್ವದಾಖಲೆ ಬರೆದು, ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದಾರೆ. ಇದರ ಜತೆಗೆ ಅಂಬಾಸೆಡರ್ ಕಾರ್ ಬಸವರಾಜ ಹೊರಟ್ಟಿ ಅವರಿಗೆ ಅದೃಷ್ಟದ ಕಾರ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೊದಲ ಚುನಾವಣೆಯಿಂದ ಅಂದ್ರೆ 1980ರಲ್ಲಿ 1903, 1986ರಲ್ಲಿ 3426, 1992ರಲ್ಲಿ 4716, 1998ರಲ್ಲಿ 6253, 2004ರಲ್ಲಿ 7369, 2010ರಲ್ಲಿ 5889, 2016ರಲ್ಲಿ 7480 ಹಾಗೂ ಈ ಚುನಾವಣೆಯಲ್ಲಿ 9266 ಮತ ಪಡೆಯುವ ಮೂಲಕ ಚುನಾವಣೆಯಿಂದ ಚುನಾವಣೆಗೆ ಹೊರಟ್ಟಿ ವರ್ಚಸ್ಸು ಹೆಚ್ಚಾಗಿರೋದು ಗಮನಾರ್ಹ ಸಂಗತಿ. ಗೆಲುವಿನ ನಗೆ ಬೀರಿದ ಮಾತನಾಡಿದ ಹೊರಟ್ಟಿ, ತಮ್ಮ ಮುಂದಿನ ನಡೆಯ ಬಗ್ಗೆ ವಿವರಿಸಿದ್ದು ಹೀಗೆ.
ಇನ್ನೂ ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಗುರು ಶಿಷ್ಯರ ಜಿದ್ದಾ ಜಿದ್ದಿಯಲ್ಲಿ ಶಿಷ್ಯ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಮೂರಂಕಿ ದಾಟಲೇ ಇಲ್ಲ. ತನ್ಮೂಲಕ ಗುರುವಿನ ಎದುರು ಜೆಡಿಎಸ್ ಅಭ್ಯರ್ಥಿ ಶರಣಾಗಿದ್ದಾನೆ. ನಾಯಕತ್ವದ ಕೊರತೆ ಹಿನ್ನೆಲೆಯಲ್ಲಿ ಕೈ ಅಭ್ಯರ್ಥಿ ಪರಾಭವಗೊಂಡ್ರೆ, ಹೊರಟ್ಟಿ ಬಿಜೆಪಿ ಸೇರ್ಪಡೆ ರಣತಂತ್ರ ಫಲ ಕೊಟ್ಟಂತಾಗಿದೆ.
Kshetra Samachara
15/06/2022 05:24 pm