ಆತ ಬಡ ಕುಟುಂಬಕ್ಕೆ ಆಸರೆಯಾಗಿದ್ದ ಯುವಕ. ಚಿಕ್ಕವಯಸ್ಸಿನಲ್ಲೇ ಕುಟುಂಬದ ಹಸಿವನ್ನು ನೀಗಿಸುವ ಕೆಲಸ ಮಾಡುವ ಮೂಲಕ ಬಡತನದ ಕಣ್ಣೀರು ಒರೆಸಲು ಮುಂದಾಗಿದ್ದ. ಆದರೆ ಇದೀಗ ವಿಧಿಯಾಟಕ್ಕೆ ಆತನೇ ಬಲಿಯಾಗಿದ್ದಾನೆ. ಅಷ್ಟಕ್ಕೂ ಆಗಿದ್ದಾದರೂ ಏನು ಅಂತೀರಾ? ಈ ಸ್ಟೋರಿ ನೋಡಿ..
ಒಂದು ಕಡೆ ಯುವಕನನ್ನು ನೆನೆದು ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು. ಮತ್ತೊಂದು ಕಡೆ ಮೃತ ಗೆಳೆಯನನ್ನು ಕಂಡು ದುಃಖಿಸುತ್ತಿರುವ ಸ್ನೇಹಿತರು. ಈ ದೃಶ್ಯ ಕಂಡುಬಂದಿದ್ದು, ಹಳೇ ಹುಬ್ಬಳ್ಳಿಯ ಬೀರಬಂದ್ ಓಣಿಯಲ್ಲಿ. ಪೈರೋಜ್ ಮೃತಪಟ್ಟ ಯುವಕ. ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದ ಪೈರೋಜ್, ತನ್ನ ಅಣ್ಣನ ಪತ್ನಿ ರಿಹಾನ್ ಬೇಗಂಗೆ ಅನಾರೋಗ್ಯ ಕಾರಣದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ. ಚಿಕಿತ್ಸೆ ಫಲಿಸದೇ ಅತ್ತಿಗೆ ಸಾವನ್ನಪ್ಪಿದ್ದು, ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ಆಸ್ಪತ್ರೆಗೆ ಹೋಗುವ ವೇಳೆಯಲ್ಲಿ ಪೈರೋಜ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಪೈರೋಜ್ ಇದ್ದ ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ
ಇನ್ನು ಒಂದೇ ಮನೆಯಲ್ಲಿ ಒಂದೇ ದಿನ ಇಬ್ಬರನ್ನು ಕಳೆದುಕೊಂಡ ಕುಟುಂಬದವರ ದುಃಖ ಹೇಳ ತೀರದಾಗಿದೆ. ಅಪಘಾತವಾಗ್ತಿದ್ದಂತೆ ಚಾಲಕ ಲಾರಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ಗಂಭೀರ ಗಾಯಗಳಾಗಿ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಪೈರೋಜ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ಯುವಕನ ಅಗಲಿಕೆಗೆ ಓಣಿಗೆ ಓಣಿಯೇ ಕಂಬನಿ ಮಿಡಿದಿದೆ. ಹಾಗೇ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸರ್ಕಾರ ಧನಸಹಾಯ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/07/2022 07:47 pm