ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದ ಶುಶ್ರೂಷಕಿಯೊಬ್ಬರ ಅಂಗಾಂಗಗಳನ್ನು ಆಕೆಯ ಪೋಷಕರು ಆಸ್ಪತ್ರೆಗೆ ದಾನ ಮಾಡುವ ಮೂಲಕ ಐವರ ಬಾಳಿಗೆ ಬೆಳಕಾಗಿದ್ದಾರೆ.
ಚಿಕ್ಕಮಗಳೂರಿನ ನರಸಿಂಹರಾಜಪುರ ತಾಲೂಕಿನ ಕೆರೆಮನೆ ಮೂಲದವರಾದ ಟಿ.ಕೆ.ಗಾನವಿ. ಕೃಷ್ಣೇಗೌಡ-ಲೀಲಾವತಿ ದಂಪತಿಯ ಎರಡನೇ ಮಗಳಾದ ಗಾನವಿ, ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಫೆಬ್ರವರಿ.8ರಂದು ರಾತ್ರಿ ಪಾಳಿ ಮಾಡುತ್ತಿದ್ದ ಸಂದರ್ಭದಲ್ಲಿ ನರ್ಸ್ ಗಾನವಿ ದಿಢೀರನೆ ಕುಸಿದು ಬಿದ್ದು, ಚಿಕಿತ್ಸೆಗೆ ಒಳಪಟ್ಟಿದ್ದರು. ನಾಲ್ಕು ದಿನಗಳ ಸಾವು ಬದುಕಿನ ಹೋರಾಟದ ನಂತರ 12ನೇ ತಾರೀಖಿನಂದು ಅವರ ಬ್ರೇನ್ ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಕುಟುಂಬಸ್ಥರು ಯುವತಿಯ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದು, ತುರ್ತು ಅಗತ್ಯವಿದ್ದ 5 ಮಂದಿಗೆ ದಾನ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಡಾ. ಕೆ. ಸುಧಾಕರ್, "ಮರಣ ಪೂರ್ವದಲ್ಲಿ ರೋಗಿಗಳ ಆರೈಕೆಯಲ್ಲಿ ಸೇವೆ ಸಲ್ಲಿಸಿದ್ದ ನರ್ಸ್ ಟಿ.ಕೆ. ಗಾನವಿ ಅವರು ಮರಣದ ಅನಂತರವೂ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಜೀವನದ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಆ ಮೂಲಕ ಲಕ್ಷಾಂತರ ಮಂದಿಗೆ ಪ್ರೇರಣೆಯಾಗಿದ್ದಾರೆ' ಎಂದು ಕಂಬನಿ ಮಿಡಿದಿದ್ದಾರೆ.
PublicNext
14/02/2022 07:56 pm