ಕುಂದಾಪುರ: ಕೊರೋನಾ ಕೆಂಗಣ್ಣಿಗೆ ಈಡಾದವರಿಗೆ ಲೆಕ್ಕವೇ ಇಲ್ಲ.ಮಹಾಮಾರಿಯ ವಕ್ರದೃಷ್ಟಿಗೆ ಬಿದ್ದ ಎಷ್ಟೋ ಕುಟುಂಬಗಳು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅಂತಹದ್ದೊಂದು ವ್ಯಥೆಯ ಕತೆ ಇದು...
ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತಿದೆ ಈ ಕುಟುಂಬದ ವ್ಯಥೆ.ಕುಂದಾಪುರ ತಾಲೂಕಿನ ನಾಡ ಗುಡ್ಡೆಅಂಗಡಿಯ ಸಂಸಾಡಿಯ ಈ ಕುಟುಂಬ ದುಡಿಮೆಯಲ್ಲೇ ನೆಮ್ಮದಿಯ ಬದುಕು ಕಟ್ಟಿಕೊಂಡಿತ್ತು.ಒಬ್ಬ ಮಗನನ್ನು ಕಳೆದುಕೊಂಡ ಕೆಲ ದಿನಗಳಲ್ಲೇ ಇನ್ನೊಬ್ಬ ಮಗನೂ ಕೊರೋನಾ ಮಹಾಮಾರಿಗೆ ಬಲಿಯಾದ! ಅಲ್ಲಿಗೆ ಕೆಲವೇ ದಿನಗಳ ಅಂತರದಲ್ಲಿ ಮನೆಯ ದೀಪಗಳೇ ಆರಿಹೋಗಿವೆ.ಈಗ ವಯೋವೃದ್ಧ ತಂದೆ ತಾಯಿ ಕಣ್ಣೀರಲ್ಲೇ ಕೈತೊಳೆಯುತ್ತಾ ,ದಿನ ದೂಡಲೂ ಕಷ್ಟ ಪಡುತ್ತಿದ್ದಾರೆ.
ಕುಂದಾಪುರದ ನಾಡ ಗುಡ್ಡೆಯಂಗಡಿ ಸಂಸಾಡಿಯ ಶಿವರಾಮ ಗಾಣಿಗರ ಇಬ್ಬರು ಪುತ್ರರಾದ ವೀರೇಂದ್ರ (33) ಮತ್ತು ವಿಶ್ವನಾಥ (31) ಕೊರೋನಾ ಎರಡನೇ ಅಲೆಗೆ ಮೃತರಾಗಿ ಕೆಲವು ದಿನಗಳೇ ಕಳೆದಿವೆ.ಆದರೆ ಹೆತ್ತವರ ರೋದನೆ ಮಾತ್ರ ಇನ್ನೂ ನಿಂತಿಲ್ಲ.ಇಬ್ಬರು ಗುಂಡುಕಲ್ಲಿನಂತಹ ಮಕ್ಕಳು.ಅದೂ ಕೆಲವೇ ದಿನಗಳ ಅಂತರದಲ್ಲಿ! ಹಿರಿಯ ಪುತ್ರ ವೀರೇಂದ್ರ 8 ತಿಂಗಳ ಹಿಂದೆಯಷ್ಟೇ ತೀರ್ಥಹಳ್ಳಿಯ ಅನಾಥ ಯುವತಿಯನ್ನು ಮದುವೆಯಾಗಿದ್ದ.ದೇವರು ಅವರ ಪಾಲಿಗೆ ನಿಜವಾಗಲೂ ಇಲ್ಲ ಅಂತ ಅನಿಸಿಬಿಡ್ತು... ಆಯ್ಯೋ ವಿಧಿಯೇ.. ಒಂದೇ ವಾರದಲ್ಲಿ ಅಣ್ಣ ತಮ್ಮ ಇಬ್ಬರೂ ಇನ್ನಿಲ್ಲವಾದರು. ನಮಗೆ ತುಂಬಾ ನೋವು ಆಗ್ತಾ ಇದೆ. ಆದ್ರೆ ದೇವರಲ್ಲಿ ಕೇಳೋದು ಇಷ್ಟೇ.. ಇದ್ದ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ತಂದೆ- ತಾಯಿಗೆ ಹಾಗೂ ಸೊಸೆಗೆ ನೋವನ್ನು ಭರಿಸುವ ಶಕ್ತಿ ಕೊಡು ಎಂದು ಗ್ರಾಮದ ಜನರು ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಸಂಸಾಡಿಯ ಪರಿಸರದಲ್ಲಿ ಈಗಲೂ ಮೌನ ಮಡುಗಟ್ಟಿದೆ.ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿ ಜೀವನ ನಿರ್ವಹಣೆಗೂ ಕಷ್ಟಪಡುತ್ತಿದ್ದಾರೆ ಅಂತಾರೆ ಸ್ಥಳೀಯರು.
ಶಿವರಾಮ ಗಾಣಿಗರ ಇಬ್ಬರು ಪುತ್ರರು ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸಿ ಮನೆ ನಡೆಸುತ್ತಿದ್ದರು.ಇಂತಹ ಚಿನ್ನದಂಥ ಅಣ್ಣ ತಮ್ಮಂದಿರಿಬ್ಬರನ್ನೂ ಕೊರೋನಾ ಒಂದೇ ವಾರದ ಅಂತರದಲ್ಲಿ ಬಲಿ ತೆಗೆದುಕೊಂಡದ್ದು ಊರವರೂ ಆ ನೋವಿನಿಂದ ಹೊರಬಂದಿಲ್ಲ. ಸದ್ಯ ಶಿವರಾಮ ಗಾಣಿಗರು ತಮ್ಮ ಕುಟುಂಬದ ಆಧಾರ ಸ್ಥಂಭಗಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅಷ್ಟೇ ಅಲ್ಲ ,ಮಗ ವೀರೇಂದ್ರ ಗಾಣಿಗ ಎಂಟು ತಿಂಗಳ ಹಿಂದೆಯಷ್ಟೆ ಅನಾಥ ಯುವತಿಯನ್ನು ಕೈ ಹಿಡಿದು ಬಾಳಸಂಗಾತಿ ಮಾಡಿಕೊಂಡಿದ್ದ.ಆದರೆ ಮಹಾಮಾರಿ ಕೊರೋನಾ ಮೊದಲೇ ಅನಾಥೆಯಾಗಿದ್ದ ಆಕೆಯನ್ನು ಮತ್ತೆ ಏಕಾಂಗಿಯಾಗಿಸಿದೆ.ಇಂತಹ ವ್ಯಥೆಗಳು ಇನ್ನೆಷ್ಟಿವೆಯೋ!?
PublicNext
10/08/2021 07:08 pm