ನವದೆಹಲಿ: ಭಾರತವು ಗಣನೀಯ ವೇಗದಲ್ಲಿ ಕೊರೊನಾ ಲಸಿಕಾ ಯೋಜನೆ ನಡೆಸಿದ್ದು, ಕಳೆದ 10 ಕೋಟಿ ಲಸಿಕೆಗಳನ್ನು ಭಾರತ ಕೇವಲ 13 ದಿನಗಳಲ್ಲಿ ನೀಡಿ ಸೈ ಎನಿಸಿದೆ.
ಭಾರತದಲ್ಲಿ ಜನರಿಗೆ ಈವರೆಗೆ ನೀಡಲಾಗಿರುವ ಲಸಿಕೆ ಡೋಸ್ಗಳ ಸಂಖ್ಯೆ 75 ಕೋಟಿ ಗಡಿ ಮುಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ನಿನ್ನೆ (ಸೆಪ್ಟೆಂಬರ್ 13ರಂದು) ತಿಳಿಸಿದ್ದಾರೆ. ಲಸಿಕೆ ಪಡೆದುಕೊಂಡ 75 ಕೋಟಿ ಜನರ ಪೈಕಿ 57 ಕೋಟಿಗೂ ಹೆಚ್ಚು ಜನರು ಮೊದಲ ಡೋಸ್ ಪಡೆದರೆ, 18 ಕೋಟಿ ಜನರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತದಲ್ಲಿ ಲಸಿಕಾ ಯೋಜನೆಗೆ ಹೊಸ ಆಯಾಮ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟ ಅವರು, 'ಭಾರತಕ್ಕೆ ಅಭಿನಂದನೆ. ದೇಶದ 75ನೇ ಸ್ವಾತಂತ್ರ್ಯೋತ್ಸವದ ವೇಳೆ 75 ಕೋಟಿ ಲಸಿಕೆಗಳನ್ನ ಹಾಕಲಾಗಿದೆ' ಎಂದು ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ.
ಭಾರತದ ಲಸಿಕಾ ಕಾರ್ಯದ ವೇಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದಲ್ಲಿ ಮೊದಲ 10 ಕೋಟಿ ಲಸಿಕೆ ಡೋಸ್‌ಗಳನ್ನ ಹಾಕಲು 85 ದಿನಗಳು ಬೇಕಾದವು. ಆದರೆ ಕಳೆದ 10 ಕೋಟಿ ಡೋಸ್‌ಗಳನ್ನು ಕೇವಲ 13 ದಿನಗಳಲ್ಲಿ ನೀಡಲಾಗಿದೆ. ಲಸಿಕಾ ಯೋಜನೆಗೆ ಇಷ್ಟು ಚುರುಕು ಮುಟ್ಟಿಸಿದ ಭಾರತಕ್ಕೆ ಅಭಿನಂದನೆ ಎಂದು ಡಬ್ಲ್ಯೂಎಚ್ಒ ಆಗ್ನೇಯ ಏಷ್ಯನ್ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಕ್ಷೇತ್ರಪಾಲ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
PublicNext
14/09/2021 09:39 pm