ಕಲಬುರಗಿ: ಹೈದ್ರಾಬಾದ ಕರ್ನಾಟಕ ಇತಿಹಾಸ ರಚನಾ ಸಮಿತಿಯ ಕಾರ್ಯಾಲಯವನ್ನು ಮುಂದಿನ ವಾರದಲ್ಲಿ ಗುಲಬರ್ಗಾ ವಿ.ವಿ. ಆವರಣದಲ್ಲಿ ಆರಂಭಿಸಲಾಗುವುದು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಹೈದ್ರಾಬಾದ ಕರ್ನಾಟಕ ಇತಿಹಾಸ ರಚನಾ ಸಮಿತಿಯ ಅಧ್ಯಕ್ಷರಾಗಿರುವ ಕೃಷ್ಣ ಬಾಜಪೇಯಿ ಅವರು ಹೇಳಿದರು.
ಮಂಗಳವಾರ ತಮ್ಮ ಕಚೇರಿಯಲ್ಲಿ ಸಮಿತಿ ಸಭೆ ನಡೆಸಿದ ಅವರು ಸಮಿತಿಯ ಸ್ಥಾಪನೆಯ ಉದ್ದೇಶ ಮತ್ತು ಇದೂವರೆಗಿನ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡ ನಂತರ ಸಮಿತಿಗೆ ಪ್ರತ್ಯೇಕವಾದ ಕಚೇರಿ ಇಲ್ಲ. ಪ್ರತ್ಯೇಕವಾದ ಕಚೇರಿ ಸ್ಥಾಪಿಸಿ ಮೂಲಸೌಕರ್ಯ ಕಲ್ಪಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಅವರು, ಕೆ.ಕೆ.ಆರ್.ಡಿ.ಬಿ. ಅನುದಾನದಿಂದ ಗುಲಬರ್ಗಾ ವಿ.ವಿ. ಆವರಣದಲ್ಲಿ ಸ್ಥಾಪಿಸಲಾಗಿರುವ ಪ್ರಾದೇಶಿಕ ಅಧ್ಯಯನ ಮತ್ತು ಅಭಿವೃದ್ದಿ ಕೇಂದ್ರದಲ್ಲಿಯೆ ಸಮಿತಿ ಕಚೇರಿ ಸ್ಥಾಪಿಸಲಾಗುವುದು. ಇಲ್ಲಿ ಸಮಿತಿ ಸದಸ್ಯರಿಗೆ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಲಾಗುವುದು. ಶೀಘ್ರವೇ ತಾವು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಇತಿಹಾಸ ತುಂಬಾ ಶ್ರೀಮಂತಿಕೆಯಿಂದ ಕೂಡಿದೆ. ಇತಿಹಾಸ ರಚನೆ ಸಂದರ್ಭದಲ್ಲಿ ವಾಸ್ತವಿಕ ಮಾತ್ರ ದಾಖಲಿಸಬೇಕು ಮತ್ತು ಅದು ತಟಸ್ಥವಾಗಿರಬೇಕು. ಇತಿಹಾಸ ರಚನೆಗೆ ಸಂಬಂಧಿಸಿದ ಎಲ್ಲಾ ಭಾಗೀದಾರರ ಸಹಕಾರ ಅವಶ್ಯಕ ಎಂದ ಅವರು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಈ ವರ್ಷದಲ್ಲಿ ಪ್ರದೇಶದ ಇತಿಹಾಸ ರಚನೆಗೆ ಅಂತಿಮ ರೂಪ ನೀಡಬೇಕು ಎಂಬುದು ನನ್ನ ಬಯಕೆ ಎಂದರು.
ಇತಿಹಾಸ ರಚನೆಯ ಮಾಹಿತಿ ಸಂಗ್ರಹಕ್ಕಾಗಿ ಕಲಬುರಗಿ, ಬೀದರನಲ್ಲಿ ಈಗಾಗಲೇ ಕಾರ್ಯಾಗಾರ ಏರ್ಪಡಿಸಿದ್ದು, ಮುಂದುವರಿದ ಭಾಗವಾಗಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗೆ ಸೀಮಿತವಾಗಿ ರಾಯಚೂರಿನಲ್ಲಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಸೀಮಿತವಾಗಿ ಹೊಸಪೇಟೆಯಲ್ಲಿ ಕಾರ್ಯಗಾರ ಏರ್ಪಡಿಸಲು ಮತ್ತು ಹೈದ್ರಾಬಾದ ಕರ್ನಾಟಕ ಇತಿಹಾಸ ಕುರಿತು ಈಗಾಗಲೇ ದಾಖಲಾಗಿರುವ ವಿವಿಧ ಭಾಷೆಯಲ್ಲಿ ಪ್ರಕಟಗೊಂಡಿರುವ ಪುಸ್ತಕಗಳನ್ನು ಸಮಿತಿಯ ಮಾಹಿತಿಗೆ ಖರೀದಿಸಲು ಹಾಗೂ “ಹೈದ್ರಾಬಾದ ಕರ್ನಾಟಕವನ್ನು” ಕಲ್ಯಾಣ ಕರ್ನಾಟಕವೆಂದು ಸರ್ಕಾರ ಮರುನಾಮಕರಣ ಮಾಡಿದ್ದರಿಂದ ಸಮಿತಿಯ ಹೆಸರನ್ನು “ಕಲ್ಯಾಣ ಕರ್ನಾಟಕ ಇತಿಹಾಸ ರಚನಾ ಸಮಿತಿ” ಎಂದು ಮರುನಾಮಕರಣ ಮಾಡಲು ಸಹ ಸಭೆ ಒಪ್ಪಿಗೆ ಸೂಚಿಸಿತು.
PublicNext
11/10/2022 09:26 pm