ಕಾಂಗ್ರೆಸ್ ಶತಮಾನದಷ್ಟು ಹಳೆಯದಾದ ಪಕ್ಷ. ಆದರೆ ಸದ್ಯ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಹೀಗಾಗಿ ಪಕ್ಷವನ್ನು ಮೇಲೆತ್ತಲು ಕಾಂಗ್ರೆಸ್ ಹಿರಿಯರು ಸಾಕಷ್ಟು ಸರ್ಕಸ್ ಮಾಡುತ್ತಿದ್ದಾರೆ. ಇದರ ಮಧ್ಯೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾದ್ದು, ಜಗತ್ತಿನ ಅತೀ ದೊಡ್ಡ ಪಕ್ಷವಾದ ಕಾಂಗ್ರೆಸ್‌ಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗುವುದು ಬಹುತೇಕ ಖಚಿತವಾದಂತಾಗಿದೆ. ಇದರಿಂದ ಖರ್ಗೆ ರಾಜಕೀಯ ಕರ್ಮ ಭೂಮಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಎಸ್.. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷವಲ್ಲದೇ ಗಾಂಧಿ ಕುಟುಂಬಕ್ಕೆ ಅತೀ ನಿಷ್ಠಾವಂತ ವ್ಯಕ್ತಿ. ಎಲ್ಲದಕ್ಕಿಂತ ಮಿಗಿಲಾಗಿ ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಹರಿಕಾರ. ಹೌದು. ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದ ಕಾಂಗ್ರೆಸ್ ನಾಯಕ ಹಾಗೂ ಹಾಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಖರ್ಗೆ ಆಯ್ಕೆ ಬಹುತೇಕ ಪಕ್ಕವಾದಂತಾಗಿದೆ. 1969ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಮೊದಲಿಗೆ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ 1972ರಲ್ಲಿ ಗುರುಮಠಕಲ್ ವಿಧಾನಸಭೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು. ಇದುವರೆಗೆ ಖರ್ಗೆಯವರು ಸೋಲಿಲ್ಲದ ಸರದಾರನಂತೆ 12 ಚುನಾವಣೆ ಎದುರಿಸಿ ಕೇವಲ ಒಂದು ಬಾರಿ ಸೋಲನ್ನ ಅನುಭವಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಸೋಲು ಉಂಡಿದ್ದ ಖರ್ಗೆ, ಖರ್ಗೆಯವರ ಪಕ್ಷ ನಿಷ್ಟೆ ಕಂಡು ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿ ನಂತರ ರಾಜ್ಯಸಭೆ ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ದೇಶದ ಅತ್ಯುನ್ನತ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರು ಕಣಕ್ಕಿಳಿದಿದ್ದು, ಬಹುತೇಕ ಆಯ್ಕೆಯಾಗುವುದು ಖಚಿತವಾಗಿದೆ.
ಇನ್ನು ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿರೋ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಖರ್ಗೆಯವರೇ ಆಯ್ಕೆಯಾಗಲಿ ಅಂತ ಅವರ ಅಭಿಮಾನಿಗಳು ಕಲಬುರಗಿಯಲ್ಲಿ ಶ್ರೀ ಶರಣಬಸವೇಶ್ವರ ದೇಗುಲದಲ್ಲಿ ನೂರಾ ಒಂದು ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಇನ್ನು ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿದ್ದರಿಂದ ಖರ್ಗೆ ಮೂಲಕ ಬೂಸ್ಟರ್ ಡೋಸ್ ಕೊಡಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಹೀಗಾಗಿ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನ ಬೇರುಸಮೇತ ಸದೃಢ ಮಾಡಿ ಅಧಿಕಾರಕ್ಕೆ ತರಲು ಖರ್ಗೆ ಮುಂದಾಗಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದು ಎಲ್ಲೆಡೆ 40% ಪರ್ಸೆಂಟ್ ಸಿಎಂ ಎಂಬ ಆಪಾದನೆಗಳು ಕೇಳಿ ಬರ್ತಿರೊದ್ರಿಂದ, ಈ ಬಾರಿ ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲಿದ್ದಾರೆ ಅಂತಾರೆ ಕಾಂಗ್ರೆಸ್ ಮುಖಂಡರು.
ಅದೆನೇ ಇರಲಿ, ಶತಮಾನಗಳಷ್ಟು ಇತಿಹಾಸ ಹೊಂದಿರೋ ಜಗತ್ತಿನ ಅತೀ ದೊಡ್ಡ ಪಕ್ಷ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಹಿಂದುಳಿದ ಭಾಗದ ನಾಯಕನಿಗೆ ಒಲಿಯುವುದು ಬಹುತೇಕ ಪಕ್ಕವಾಗಿದ್ದು, ಪಕ್ಷವನ್ನ ಖರ್ಗೆಯವರು ಟ್ರ್ಯಾಕ್‌ಗೆ ತರುತ್ತಾ ಅನ್ನೊದು ಕಾದು ನೋಡಬೇಕು.
PublicNext
01/10/2022 07:19 pm