ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕೊರೊನಾ ಭಯದಲ್ಲೂ ಮದುವೆಗಾಗಿ ಹಾರಿ ಬಂದ ಕಾಮನ್ ಮ್ಯಾನ್

ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ

ಹುಬ್ಬಳ್ಳಿ : " ನಾನು ಕಾಮನ್ ಮ್ಯಾನ್ ಮುಖ್ಯಮಂತ್ರಿಯಾದರೂ ಸರಳವಾಗಿಯೇ ಇರುತ್ತೇನೆ...ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತೇನೆ...ಅನಗತ್ಯ ಸರಕಾರಿ ವೆಚ್ಚದಲ್ಲಿ ವಿಮಾನದಲ್ಲಿ ಓಡಾಡುವುದಿಲ್ಲ '' ಎಂದು ಹೇಳುತ್ತಲೆ ಸಿ.ಎಂ ಕುರ್ಚಿ ಅಲಂಕರಿಸಿರುವ ಬಸವರಾಜ್ ಬೊಮ್ಮಾಯಿ ಈಗ ತಮ್ಮ ಆಪ್ತರ ಮಕ್ಕಳ ಮದುವೆಗಾಗಿ ಹುಬ್ಬಳ್ಳಿ ಬೆಂಗಳೂರು ನಡುವೆ ವಿಮಾನದಲ್ಲಿ ಹಾರಾಡುತ್ತಿದ್ದಾರೆ.

ಇಂದು ಸರಕಾರಿ ಕಾರ್ಯಕ್ರಮಗಳಿವೆ ಎಂದು ಸೂಚಿಸಿ ಬೆಳಗ್ಗೆ ವಿಮಾನ ಮೂಲಕ ಬೊಮ್ಮಾಯಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಆದರೆ ಬಲ್ಲ ಮೂಲಗಳ ಪ್ರಕಾರ ಅವರದು ಯಾವುದೇ ಅಧಿಕೃತ ಸರಕಾರಿ ಕಾರ್ಯಕ್ರಮಗಳಿಲ್ಲವಂತೆ. ತಮ್ಮ ಇಬ್ಬರು ಆಪ್ತರ ಮಕ್ಕಳ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೊಮ್ಮಾಯಿ ಬಂದಿದ್ದಾರೆ ಎಂದು ಹೇಳಲಾಗತ್ತಿದೆ.

ಇಂದು ಹುಬ್ಬಳ್ಳಿ ಅಶೋಕ ನಗರದ ನವನಿಕೇತರ ಸಭಾಭವನದಲ್ಲಿ ಒಂದು ಮದುವೆ ಹಾಗೂ ಸತ್ತೂರು ಸಮೀಪದ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಒಂದು ಮದುವೆಗೆ ಹಾಜರಾಗಿ ಹೋಗಿದ್ದಾರೆ.

ಯಾವುದೇ ಪಕ್ಷವಿರಲಿ ಅಧಿಕಾರಕ್ಕೆ ಬರುತ್ತಲೆ ಎಲ್ಲವೂ ಮರೆತು ಹೋಗುತ್ತದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಾದ ಮುಖ್ಯಮಂತ್ರಿಗಳೇ ಈ ರೀತಿ ಸರಕಾರಿ ಕಾರ್ಯಕ್ರಮದ ನೆಪದಲ್ಲಿ ಮದುವೆ ಗೃಹಪ್ರವೇಶದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಸುತ್ತಾಡುವುದು ಎಷ್ಟು ಸರಿ ಎಂದು ಕರದಾತರು ಕೇಳುವಂತಾಗಿದೆ.

ದುರಂತದ ಸಂಗತಿ ಎಂದರೆ ಕಳೆದ ಒಂದು ವಾರದಿಂದ ಕೊರೊನಾ ರಣಕೇಕೆ ಹಾಕುತ್ತಿರುವ ಎಸ್.ಡಿಎಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಕೂಗಳತೆಯಲ್ಲಿ ಇರುವ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಮದುವೆಗೆ ಅವಕಾಶ ಕೊಟ್ಟಿರುವುದು ಹಾಗೂ ಅದರಲ್ಲಿ ಮುಖ್ಯಮಂತ್ರಿಗಳೇ ಪಾಲ್ಗೊಂಡಿರುವುದು.

ಆಸ್ಪತ್ರೆಯಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದ ನಂತರ ಮುಂಜಾಗ್ರತಾ ಕ್ರಮವಾಗಿ ಸುತ್ತಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಕಲಾಕ್ಷೇತ್ರದಲ್ಲಿ ಮದುವೆಗೆ ಅವಕಾಶ ಕೊಟ್ಟಿದ್ದು ಹೇಗೆ?

ಕೊರೊನಾ ನಿಯಮಾವಳಿಗಳಂತೆಯೇ ಎರಡು ಡೋಸ್ ಲಸಿಕೆ ಪಡೆದವರಿಗೆ ಹಾಗೂ ನಿಗದಿತ ಸಂಖ್ಯೆಯಲ್ಲಿ ಆಮಂತ್ರಿತರಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದು ಸ್ವಾಗತಾರ್ಹ, ಆದರೆ ಮದುವೆಗೆ ಬಂದವರು ಎರಡೂ ಡೋಸ್ ಲಸಿಕೆ ಪಡೆದದ್ದನ್ನು ತಪಾಸಣೆ ಮಾಡಿದವರು ಯಾರು? ಅದರ ದಾಖಲೆ ಇದೆಯೇ?

ಎರಡೂ ಡೋಸ್ ಲಸಿಕೆ ಪಡೆದಿದ್ದ ವೈದ್ಯಕೀಯ ವಿದ್ಯಾರ್ಥಿಗಳಲ್ಲಿಯೇ ಕೊರೊನಾ ಪಾಸಿಟಿವ್ ಬಂದಿತ್ತು ಎಂಬುದನ್ನು ಯಾರೂ ಮರೆಯಬಾರದು.

ಮತ್ತೇ ಕೊರೊನಾ ಹಾಗೂ ಓಮಿಕ್ರಾನ್ ವೈರಸ್ ದಂತಹ ಮಹಾಮಾರಿ ಭಯದಲ್ಲಿ ರಾಜ್ಯದ ಜನತೆ ಇದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮದುವೆ ಹಾಗೂ ಇತರೆ ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಬೇಕೆಂದು ತಜ್ಞರು ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆ ನಿಯಮಗಳನ್ನು ಪಾಲಿಸಿ ಸಮಾನ್ಯ ಜನರಿಗೆ ಮಾದರಿಯಾಗಬೇಕಾದ ಮುಖ್ಯಮಂತ್ರಿಗಳೇ ಹೀಗೆ ನಡೆದುಕೊಂಡರೆ ಏನು ಗತಿ?

Edited By :
PublicNext

PublicNext

01/12/2021 12:47 pm

Cinque Terre

27.34 K

Cinque Terre

10

ಸಂಬಂಧಿತ ಸುದ್ದಿ