ಗದಗ: ಹೆಸರು ಬೆಳೆ ಖರೀದಿ ಕೇಂದ್ರ ಬಂದ್ ಮಾಡಿದ್ದಕ್ಕೆ ರೈತರು ಆಕ್ರೋಶಗೊಂಡಿರೋ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ. ಸರ್ಕಾರ ಹೆಸರು ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆದಿದೆ. ಆದ್ರೆ ನರಗುಂದ ಪಟ್ಟಣದಲ್ಲಿ ಅಧಿಕಾರಿ ವರ್ಗ ಕುಂಟು ನೆಪ ಹೇಳಿ ಖರೀದಿ ಕೇಂದ್ರ ಬಂದ್ ಮಾಡಿದ್ದಾರೆ ಅಂತ ರೈತರು ಆರೋಪಿಸುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಹೆಸರು ಖರೀದಿ ಕೇಂದ್ರ ಬಂದ್ ಆಗಿದ್ದು, ರಾತ್ರಿ ಹಗಲು ಅನ್ನದೇ ಖರೀದಿ ಕೇಂದ್ರ ಇಂದು ತೆರೆಯುತ್ತೆ, ನಾಳೆ ತೆರೆಯುತ್ತೆ ಅಂತ ತಮ್ಮ ಹೆಸರು ಬೆಳೆ ಸಮೇತ ರೈತರು ಕಾಯ್ತಾ ಇದ್ದಾರೆ. ಇತ್ತ ಅಧಿಕಾರಿವರ್ಗ ಮಾತ್ರ ಹೆಸರು ಸಂಗ್ರಹಣೆಗೆ ಗೊಡಾಣು ಕೊರತೆ ಇದೆ. ಹೀಗಾಗಿ ಖರೀದಿ ಕೇಂದ್ರ ಬಂದ್ ಮಾಡಿದ್ದೇವೆ ಅಂತ ಹೇಳ್ತಿದ್ದಾರಂತೆ.
ನರಗುಂದ ತಾಲೂಕಿನಲ್ಲಿ ಒಟ್ಟು ಒಂಬತ್ತು ಹೆಸರು ಖರೀದಿ ಕೇಂದ್ರಗಳನ್ನ ತೆರೆಯಲಾಗಿದ್ದು,ತಾಲೂಕಿನ ಮುಖ್ಯ ಕೇಂದ್ರ ಸ್ಥಾನದಲ್ಲಿರೋ ಖರೀದಿ ಕೇಂದ್ರವೇ ಬಂದ್ ಆಗಿದೆ. ಈಗಾಗಲೇ ಗದಗ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಅನ್ನದಾತರು ಬಳಲಿ ಬೆಂಡಾಗಿದ್ದಾರೆ.ಬೆಳೆದ ಫಸಲೆಲ್ಲ ನೀರಲ್ಲಿ ಮುಳಗಡೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ರೈತವರ್ಗ ಸಂಕಷ್ಟದಲ್ಲಿ ದಿನದೂಡ್ತಿದ್ದಾರೆ. ಕುಂಟು ನೆಪ ಬಿಟ್ಟು ಖರೀದಿ ಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ರೈತರು ಒತ್ತಾಯಿಸಿದ್ದಾರೆ.
PublicNext
10/10/2022 02:27 pm