ಬೆಂಗಳೂರು: ಕೊರೊನಾಂತಕ ನಡುವೆಯೆ ರಾಜ್ಯದಲ್ಲಿ ಇಂದಿನಿಂದ 3 ದಿನಗಳ ಕಾಲ ಸಿಇಟಿ ಪರೀಕ್ಷೆ ನಡೆಯಲಿದೆ. ಇಂದು ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಪರೀಕ್ಷೆ ನಿಗದಿಪಡಿಸಲಾಗಿದೆ. ನಾಳೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ಪರೀಕ್ಷೆ ಆಯೋಜಿಸಲಾಗಿದ್ದು, ಆಗಸ್ಟ್ 30ರಂದು ಹೊರನಾಡು & ಗಡಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಒಟ್ಟು 530 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದರೆ ಇನ್ನುಳಿದ ಜಿಲ್ಲೆಗಳಲ್ಲಿ 444 ಕೇಂದ್ರಗಳು ಇವೆ. ಒಟ್ಟು 2,01,816 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಸಿಕೊಂಡಿದ್ದಾರೆ.ಕೊರೊನಾ ಸೋಂಕಿನ ಲಕ್ಷಣ ಇದ್ದವರಿಗೆ ಪ್ರತ್ಯೇಕ ಕೊಠಡಿ ಹಾಗೂ ಪರೀಕ್ಷಾ ಕೇಂದ್ರದಲ್ಲಿ ಐಸೊಲೇಷನ್ ಸೆಂಟರ್ ಮೂಲಕ ಪರೀಕ್ಷೆಗೆ ಅನುವು ಮಾಡಿಕೊಡಲಾಗುತ್ತಿದೆ.
530 ವೀಕ್ಷಕರು, 1060 ವಿಶೇಷ ಜಾಗೃತ ದಳದ ಸದಸ್ಯರು, 530 ಪ್ರಶ್ನೆಪತ್ರಿಕೆ ಪಾಲಕರು, 8409 ಕೊಠಡಿ ಮೇಲ್ವಿಚಾರಕರು ಹಾಗೂ 20,415 ಅಧಿಕಾರಿ ವರ್ಗದ ಸಿಬ್ಬಂದಿಗಳು ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಆಗಸ್ಟ್ 30ರಂದು ಹೊರನಾಡು & ಗಡಿಭಾಗದ ವಿದ್ಯಾರ್ಥಿಗಳಿಗೆ ನಡೆಯಲಿರುವ ಪರೀಕ್ಷೆ ರಾಜ್ಯದ 6 ಸ್ಥಳಗಳಲ್ಲಿ ಅಂದರೆ ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ನಡೆಯಲಿದೆ. ಈ ಪರೀಕ್ಷೆಗೆ 1682 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮಗಳು
* ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾಸ್ಕ್ ಕಡ್ಡಾಯ.
* ಓಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಗಳು ತಮ್ಮ ಹೆಸರನ್ನು ಬರೆಯಬೇಕು.
* ಅಭ್ಯರ್ಥಿಗಳು ಸಿಇಟಿ ಸಂಖ್ಯೆಯನ್ನು, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ತುಂಬಬೇಕು.
* ಓಎಂಆರ್ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯಲ್ಲಿರುವ ಕ್ರಮ ಸಂಖ್ಯೆ ಒಂದೇ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
* ಉತ್ತರಗಳನ್ನು OMR ಉತ್ತರ ಪತ್ರಿಕೆಯಲ್ಲಿ ಶೇಡ್ ಮಾಡುವುದರ ಮೂಲಕ ಉತ್ತರಿಸಬೇಕು.
* ಪರೀಕ್ಷೆಗೆ Blue/ Black ಬಾಲ್ ಪಾಯಿಂಟ್ ಪೆನ್ ಬಳಸಬೇಕು.
* ಪ್ರವೇಶ ಪತ್ರದ ಜೊತೆಗೆ ಕಾಲೇಜಿನ ಗುರುತಿನ ಚೀಟಿ ಕಡ್ಡಾಯ.
* ಪರೀಕ್ಷಾ ಕೊಠಡಿಯೊಳಗೆ ವಾಚ್, ಮೊಬೈಲ್ ನಿಷೇಧ.
* ಅಭ್ಯರ್ಥಿಗಳು ಓ.ಎಂ.ಆರ್. ಉತ್ತರ ಹಾಳೆಯಲ್ಲಿ ಎಡಗೈ ಹೆಬ್ಬೆರಳ ಗುರುತನ್ನು ಹಾಕುವಂತಿಲ್ಲ.
PublicNext
28/08/2021 10:04 am