ಧಾರವಾಡ: ಕರ್ನಾಟಕ ಸರ್ಕಾರವು 2020-21ನೇ ಆರ್ಥಿಕ ವರ್ಷಕ್ಕೆ ಒಂದು ಕೋಟಿ ರೂಪಾಯಿಗಳ ಏಕಕಾಲಿಕ ಅನುದಾನದಡಿಯಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ್ದು, ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು ಪೀಠದ ಮೊದಲ ಪ್ರಾಧ್ಯಾಪಕರನ್ನಾಗಿ ಕಾನೂನು ತಜ್ಞ, ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ವಿ. ಪಾಟೀಲ ಅವರನ್ನು ನೇಮಿಸಿದೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ವಿಜ್ಞಾನೇಶ್ವರ ಅಧ್ಯಯನ ಪೀಠವು ಕಾನೂನು ಮತ್ತು ನ್ಯಾಯಶಾಸ್ತ್ರದ ಜ್ಞಾನಕ್ಷೇತ್ರಕ್ಕೆ ಅತ್ಯಂತ ಮಹತ್ವದ ಕಾಣಿಕೆಯನ್ನು ನೀಡುವ ಸದುದ್ದೇಶವನ್ನು ಹೊಂದಿದೆ. ಈ ಮೂಲಕ ಕರ್ನಾಟಕದ ಸಾಂಸ್ಕೃತಿಕ ಹಿನ್ನಲೆ, ಸಾಮಾಜಿಕ ಪರಿವರ್ತನೆ ಮತ್ತು ಮಾನವ ಹಕ್ಕುಗಳ ವಿಸ್ತರಣೆಯ ಬೆಳಕಿನಲ್ಲಿ ಕೌಟುಂಬಿಕ ಮತ್ತು ಸಾರ್ವಜನಿಕ ಕಾನೂನುಗಳನ್ನು ವಿಶ್ಲೇಷಿಸುವ ಕೆಲಸವನ್ನು ಈ ಪೀಠವು ಮಾಡಲಿದೆ. ಈ ಮಹತ್ವದ ಜವಾಬ್ದಾರಿಯನ್ನು ಕಾನೂನು ಸಹೃದಯಿ ಡಾ.ಶಿವರಾಜ ಪಾಟೀಲ ಅವರು ಸಮರ್ಥವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಲಿದ್ದಾರೆ.
ವಿಜ್ಞಾನೇಶ್ವರ ಅಧ್ಯಯನ ಪೀಠ: 12ನೇ ಶತಮಾನದಲ್ಲಿ ಯಾಜ್ಞವಲ್ಕ ಸ್ಮೃತಿಗೆ ಮಿತಾಕ್ಷರವೆಂಬ ಭಾಷ್ಯಾ ಗ್ರಂಥವನ್ನು ರಚಿಸಿ ಭಾರತದ ಉದ್ದಗಲಕ್ಕೂ ಹಿಂದೂ ಕಾನೂನಿನ ಸುಧಾರಣೆಗೆ ಕಾರಣಿಕರ್ತರಾದ ಹಾಗೂ ಕಲಬುರಗಿಯ ಮರ್ತೂರಿನಲ್ಲಿ ಜನಿಸಿ ಚಾಲುಕ್ಯ ಆರನೇ ವಿಕ್ರಮಾದಿತ್ಯರ ಆಸ್ಥಾನ ವಿದ್ವಾಂಸರಾದ ವಿಜ್ಞಾನೇಶ್ವರರ ಹೆಸರನ್ನು ಈ ಪೀಠಕ್ಕೆ ನೀಡಲಾಗಿದೆ.
ಈ ಪೀಠವು ಅನಾದಿಕಾಲದಿಂದ ಹಿಡಿದು ಪ್ರಸ್ತುತ ದಿನಮಾನಗಳವರೆಗೆ ಕಾನೂನು ಮತ್ತು ನ್ಯಾಯಶಾಸ್ತ್ರಕ್ಕೆ ಅಮೂಲ್ಯ ಕೊಡುಗೆಗಳನ್ನಿತ್ತ ಮಹಾನುಭಾವರುಗಳ ಮೇಲೆ ಸಂಶೋಧನೆಯನ್ನು ನಡೆಸುವ, ವಿಶೇಷ ಉಪನ್ಯಾಸಗಳು, ವಿಚಾರ ಸಂಕಿರಣ, ಸಮ್ಮೇಳನ, ಸಂಶೋಧನಾ ಕೃತಿಗಳ ರಚನೆ ಮತ್ತು ಕಾನೂನು ಕ್ಷೇತ್ರಕ್ಕೆ ಇತರರು ನೀಡಿದ ಕೊಡುಗೆಗಳನ್ನು ದಾಖಲಿಸುವ ಮತ್ತು ಕೌಟುಂಬಿಕ ಕಾನೂನುಗಳಿಗೆ ಸಂಬಂಧಿಸಿದ ಗುಣಮಟ್ಟದ ಪ್ರಕಾಶನಗಳನ್ನು ಹೊರತರುವ ಕಾರ್ಯಕ್ಕೆ ನಿಯೋಜಿತವಾಗಿದೆ.
ವಿಜ್ಞಾನೇಶ್ವರ ಅಧ್ಯಯನ ಪೀಠದ ಯೋಜನೆಯ ವಿವರ ಹಾಗೂ ಕಾರ್ಯವೈಖರಿಯನ್ನು ಒದಗಿಸುವ ಸಂಬಂಧ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ವಿಜ್ಞಾನೇಶ್ವರ ಅಧ್ಯಯನ ಪೀಠ 2020ರ ಉಪಕಾನೂನನ್ನು ಜಾರಿಗೆ ತಂದಿದೆ. ಈ ಕಾಯ್ದೆಯಡಿ ರಚಿತಗೊಂಡ ಶೋಧನಾ ಸಮಿತಿಯು ಅವಿರೋಧವಾಗಿ ಆಯ್ಕೆ ಮಾಡಿ, ಶಿಫಾರಸ್ಸು ಮಾಡಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಸರ್ವಾನುಮತದಿಂದ ಭಾರತದ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾಗಿರುವ ಡಾ. ಶಿವರಾಜ ಪಾಟೀಲ ಅವರನ್ನು ವಿಜ್ಞಾನೇಶ್ವರ ಅಧ್ಯಯನ ಪೀಠದ ಮೊದಲ ಪ್ರಾಧ್ಯಾಪಕರೆಂದು ನೇಮಕ ಮಾಡಲಾಗಿದೆ.
PublicNext
29/01/2021 06:12 pm