ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಕರ್ನಾಟಕ ಸರಕಾರ ಮುಂದಾಗಿದೆ. ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಮುಂದುವರಿದಿರುವುದರಿಂದ ರಾತ್ರಿ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಣತರ ಜತೆ ಸಭೆ ನಡೆಸಲಾಗಿದ್ದು, ರಾಜ್ಯಾದ್ಯಂತ ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ನಿಷೇಧಾಜ್ಞೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ನೈಟ್ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ಕೇರಳ ಮತ್ತು ಮಹಾರಾಷ್ಟ್ರ ಗಡಿ ಭಾಗಗಳಿಗೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಕೂಡ ಜಾರಿಗೆ ಬರಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ಗಡಿ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ. ಆರೋಗ್ಯ ಪರಿಣತರು ಮತ್ತು ಶಿಕ್ಷಣ ತಜ್ಞರ ಜತೆ ಸಮಾಲೋಚನೆ ನಡೆಸಲಾಗಿದ್ದು, ಹಂತ ಹಂತವಾಗಿ ಶಾಲೆ ತೆರೆಯಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
9, 10, 11, ಮತ್ತು 12ನೇ ತರಗತಿಗಳಿಗೆ ಆಗಸ್ಟ್ 23ರಿಂದ ಶಾಲೆಗಳನ್ನು ಷರತ್ತುಬದ್ಧವಾಗಿ ಆರಂಭಿಸಲು ತೀರ್ಮಾನಿಸಲಾಗಿದೆ. ತರಗತಿಗಳು ಬ್ಯಾಚ್ ಗಳಲ್ಲಿ ನಡೆಯಲಿದ್ದು, ಎರಡು ಬ್ಯಾಚ್ ಗಳಲ್ಲಿ ಪರ್ಯಾಯ ದಿನಗಳಂದು ತರಗತಿಗಳನ್ನು ನಡೆಸಲಾಗುವುದು. ಇದರ ವಿವರಗಳನ್ನು ಮುಂದೆ ನೀಡಲಾಗುವುದು ಎಂದರು. ಆಗಸ್ಟ್ ಅಂತ್ಯದ ವೇಳೆ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಗಮನಿಸಿ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳನ್ನು ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
PublicNext
06/08/2021 03:09 pm